ದೈಹಿಕ ಶಿಕ್ಷಣ -
ಆರೋಗ್ಯ, ರೋಗನಿರೋಧಕ ಶಕ್ತಿ, ದೃಢವಾದ ಮಾಂಸಖಂಡಗಳು, ಕಷ್ಟಸಹಿಷ್ಣುತೆ, ಸಹನೆ, ದೀರ್ಘಕಾಲ ಕೆಲಸ ಮಾಡಬಲ್ಲ ಸ್ಥಿತಿ ಮುಂತಾದ ಸಲಕ್ಷಣಗಳುಳ್ಳ ದೇಹದ ಬೆಳವಣಿಗೆ, ಚಲನಕೌಶಲ್ಯ, ಸೂಕ್ತ ಮನೋಭಾವ ಮತ್ತು ಸದಭ್ಯಾಸಾದಿಗಳನ್ನು ವ್ಯಕ್ತಿಯಲ್ಲಿ ರೂಢಿಸಲು ನೆರವಾಗುವಂಥ ಜ್ಞಾನ ಮತ್ತು ಚಟುವಟಿಕೆಗಳ ಕಾರ್ಯಕ್ರಮ.  ಇದು ಸಾಮಾನ್ಯ ಶಿಕ್ಷಣಕ್ಕೆ ಎಷ್ಟು ಪೂರಕ ಎಂಬ ಅಂಶ ಸ್ಪಷ್ಟಪಟ್ಟಂತೆಲ್ಲ ಶಾಲಾ ಕಾಲೇಜುಗಳಲ್ಲಿ ಇದರ ಸ್ಥಾನ ಉತ್ತಮಗೊಂಡು ಇದರ ಪಠ್ಯಕ್ರಮ, ಬೋಧನ ವಿಧಾನ, ಉಪಕರಣಾದಿಗಳ ಪೂರೈಕೆ, ಅಧ್ಯಾಪಕರ ಪ್ರಶಿಕ್ಷಣ, ಆಂತರಿಕ ಮತ್ತು ಅಂತರ ಶಾಲಾ ಕ್ರೀಡಾಕೂಟಗಳಲ್ಲಿ ಆಸಕ್ತಿ, ಸಂಶೋಧನೆ ಮತ್ತು ಆಡಳಿತ ಈ ಅಂಶಗಳ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಕಂಡುಬರುತ್ತಿದೆ.

	ಇತಿಹಾಸ : ಪ್ರಾಚೀನ ನಾಗರಿಕತೆಗೆ ಹೆಸರಾದ ಎಲ್ಲ ಜನಾಂಗಗಳಲ್ಲೂ ದೈಹಿಕ ಶಿಕ್ಷಣಕ್ಕೆ ಪ್ರಾಧಾನ್ಯವಿದ್ದು ಅದು ಸಾಮಾನ್ಯಶಿಕ್ಷಣ ಅಂಗವೆಂದು ಪರಿಗಣಿಸಲಾಗುತ್ತಿತ್ತು.  ಆಧ್ಯಾತ್ಮಿಕ ದೃಷ್ಟಿಗೆ ಪ್ರಾಧಾನ್ಯವಿತ್ತಿದ್ದ ಭಾರತೀಯರು ಬ್ರಹ್ಮಚರ್ಯ ಕ್ರಮದಲ್ಲಿ ವಿದ್ಯಾರ್ಥಿಗಳು ಹಲವು ನೀತಿನಿಯಮಗಳನ್ನು ಅನುಸರಿಸಬೇಕೆಂದು ವಿಧಿಸಿದ್ದರೂ ದೇಹವನ್ನು ದಂಡಿಸಿ  ಕೃಶಪಡಿಸುವುದನ್ನು ಎತ್ತಿ ಹಿಡಿದಿರಲಿಲ್ಲ.  ಆಹಾರದ ಹಾಗೂ ಉಡುಪಿನ ಬಗ್ಗೆ ಸಾತ್ತ್ವಿಕತೆಗೆ  ಪ್ರಾಧಾನ್ಯವಿತ್ತಿದ್ದರೂ ಮಕ್ಕಳ ಆರೋಗ್ಯ, ವ್ಯಾಯಾಮ, ಕಷ್ಟ ಸಹಿಷ್ಣುತೆ ಕಾರ್ಯಕೌಶಲ್ಯ ಇವೆಲ್ಲ ವರ್ಧಿಸುವಂಥ ಸಾಂಪ್ರದಾಯಿಕ ಚಟುವಟಿಕೆಗಳಿಗೆ ಅವಕಾಶವಿತ್ತಿದ್ದರು.  ಆದರೆ ಆತ್ಮದ ಉತ್ಕರ್ಷಣಕ್ಕೆ ಸರ್ವವೂ ಮೀಸಲಾಗಿದ್ದ ಆ ಕಾಲದಲ್ಲಿ ದೈಹಿಕ ಶಿಕ್ಷಣ ಸಾಮಾನ್ಯ ಶಿಕ್ಷಣದ ಅಂಗವೆನಿಸಿರಲಿಲ್ಲ.  ಆದರೂ ಕೆಲವು ವರ್ಣಗಳಲ್ಲಿ ಮಲ್ಲವಿದ್ಯೆ, ಬಿಲ್ಲುವಿದ್ಯೆ, ರಣಕೌಶಲಾದಿಗಳನ್ನು ಪ್ರತ್ಯೇಕವಾಗಿ ಕಲಿಯುವ ಅವಕಾಶವಿತ್ತು.  ಶತೃಗಳ ದಾಳಿಯ ಫಲವಾಗಿ ಸ್ಥಳೀಯ ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದ ಕದನಗಳು ಹೆಚ್ಚಿದಂತೆ ಪ್ರತಿ ಗ್ರಾಮದಲ್ಲೂ ಬಿಲ್ಲುಗಾರಿಕೆ, ಕತ್ತಿವರಿಸೆ, ಮುಂತಾದ ರಣಕೌಶಲ್ಯದಲ್ಲಿ ತರಪೇತು ಸಾರ್ವಜನಿಕವಾಗಿ ಸಾಗುತ್ತಿತ್ತು.  ಮಹಿಳೆಯರಿಗೆ  ವಿದ್ಯಾ ಸೌಲಭ್ಯವಿದ್ದು ತೀರ ಪ್ರಾಚೀನ ಕಾಲದಲ್ಲೂ ಅವರ ಭಾಗಕ್ಕೆ ದೈಹಿಕ ಶಿಕ್ಷಣ ಅಗತ್ಯವೆಂಬ ಭಾವನೆಯಿದ್ದಂತೆ ತೋರುವುದಿಲ್ಲ.  ಆದರೆ ಕೆಲವು ವರ್ಣಗಳ ಮಹಿಳೆಯರು ರಣಕೌಶಲಾದಿ ಚಟುವಟಿಕೆಗಳಲ್ಲಿ ನಿಷ್ಣಾತರಾಗಿದ್ದ ಅಂಶದಿಂದ ಅವರಿಗೆ  ಅಂಥ ಶಿಕ್ಷಣ ದೊರಕಿದ್ದಿರಬೇಕೆಂದು ತೊರುತ್ತದೆ.  ಪ್ರಾಚೀನ ಕಾಲದ ಐಗುಪ್ತರೂ ಬ್ಯಾಬಿಲೋನಿಯದವರೂ ಹೀಬ್ರುಗಳೂ ದೈಹಿಕ ಶಿಕ್ಷಣದ ಪ್ರಾಮುಖ್ಯತೆಯನ್ನು ಅರಿತುಕೊಂಡು ವಿವಿಧ ರೀತಿಯ ಕಾರ್ಯಕ್ರಮಗಳನ್ನು ರೂಢಿಸಿಕೊಂಡಿದ್ದರು.

	ಕ್ರಿ. ಪೂ. 6ನೆಯ ಶತಮಾನದ ಪಾರಸಿಕರಲ್ಲಿ ಆಕ್ರಮಣದಾಹ ಹೆಚ್ಚಿದಾಗ ಅಂದು ಅವರ ನಾಯಕನಾಗಿದ್ದ ಸೈರಸ್ ಸೈನ್ಯಾಚರಣೆಗಾಗಿ ಗಟ್ಟಿಮುಟ್ಟಾದ ಯುವಜನರ ತರಬೇತಿಗೆ ಗಮನ ಕೊಟ್ಟಿದ್ದ ; ಧೈರ್ಯದಿಂದ ರಣರಂಗದಲ್ಲಿ ಕಾದಾಡಬಲ್ಲ ಪ್ರಯಾಣದ ಎಡರುಗಳನ್ನು ಹಸಿವು ಬಾಯಾರಿಕೆಗಳನ್ನು ಸಹಿಸಬಲ್ಲ ಸೈನಿಕರ ತರಬೇತಿಗಾಗಿ ನಿರ್ದಿಷ್ಟ ವ್ಯವಸ್ಥೆಯನ್ನೇ ಆತ ಕೈಗೊಂಡಿದ್ದ.  ಆರು ವರ್ಷದ ಗಂಡು ಮಕ್ಕಳನ್ನು ತರಬೇತಿ ಶಾಲೆಗೆ ಸೇರಿಸಿಕೊಂಡು ಅಲ್ಲಿ ಅವರಿಗೆ ಓಡುವುದು, ನೆಗೆಯುವುದು, ಗುಡ್ಡ ಹತ್ತುವುದು, ಕುದುರೆ ಸವಾರಿ, ಜಾವೆಲಿನ್ ಎಸೆತ ಮುಂತಾದ ಸೈನಿಕ ಕಾರ್ಯಾಚರಣೆಗೆ ನೆರವಾಗತಕ್ಕ ಚಟುವಟಿಕೆಗಳಲ್ಲಿ ತರಬೇತು ನೀಡುವ ವ್ಯವಸ್ಥೆ ಮಾಡಿದ್ದ.  ಅವರ ತರಬೇತಿಯಲ್ಲಿ ನೈತಿಕ ಮತ್ತು ದೈಹಿಕ ಶಿಕ್ಷಣ ಪ್ರಧಾನ ಅಂಶವೆನಿಸಿದವು.  ಆದರೆ ಹೆಣ್ಣು ಮಕ್ಕಳು  ಯುದ್ಧದಲ್ಲಿ ಭಾಗಿಗಳಾಗುತ್ತಿರಲಿಲ್ಲವಾದ್ದರಿಂದ ಅವರಿಗೆ ದೈಹಿಕ ಶಿಕ್ಷಣ ಸೌಲಭ್ಯ ಇರಲಿಲ್ಲ.  ಸೈರಸ್ಸನ ಅನಂತರ ದೈಹಿಕ ಶಿಕ್ಷಣದ ಆಸಕ್ತಿ ಪಾರಸಿಕರಲ್ಲಿ ಕುಂದಿತು.  ಅದರ ಫಲವಾಗಿ ಯುವಕರಲ್ಲಿ ಕಾದಾಡುವ ಶಕ್ತಿಯೂ ಕುಂದುತ್ತ ಬಂತು.  ಆದ್ದರಿಂದಲೇ ಅಲೆಕ್ಸಾಂಡರ್ ಸುಲಭವಾಗಿ ಪಾರಸಿಕರನ್ನು ಸೋಲಿಸಿ ದೇಶವನ್ನು ಗೆದ್ದು ಮುಂದೆ ನುಗ್ಗಲು ಸುಲಭವಾಯಿತು.

	ಪಾರಸಿಕರಂತೆ ಸ್ಪಾರ್ಟನ್ನರೂ ಯುದ್ಧಾಚರಣೆಯಲ್ಲಿ ತೊಡಗುತ್ತಿದ್ದರು.  ಅವರು ದೈಹಿಕ ಶಿಕ್ಷಣಕ್ಕೆ ಪ್ರಾಧಾನ್ಯವಿತ್ತಿದ್ದರು.  ಏಳು ವರ್ಷದ ಬಾಲಕರನ್ನು ಪೋಷಕರ ಮನೆಯಿಂದ ಪ್ರತ್ಯೇಕಿಸಿ ಅಖಾಡಕ್ಕೆ ಸೇರಿಸಿಕೊಂಡು ದೃಢವಾದ ದೇಹದ ಸೈನಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು.  ಓಡುವುದು, ನೆಗೆಯುವುದು, ಕುಸ್ತಿ, ಕತ್ತಿವರಸೆ, ವಿಜಯ ನೃತ್ಯ ಮುಂತಾದ ಚಟುವಟಿಕೆಗಳ ಮೂಲಕ ತರಬೇತು ನೀಡುತ್ತಿದ್ದರು. ನಿರ್ಬಲ ಹಾಗೂ ದೇಹದಾಢ್ರ್ಯವಿಲ್ಲದ ಮಕ್ಕಳನ್ನು ಸಾಯಲು ಬಿಡುತ್ತಿದ್ದರು.  ಅವರ ದೃಷ್ಟಿಯಲ್ಲಿ ಅವರು ಅಪ್ರಯೋಜಕರು.  ಉತ್ತಮ ಸಂತಾನಕ್ಕೆ ಕಾರಣರಾಗುವರೆಂಬ ಭಾವನೆಯಿಂದ ಬಾಲಕಿಯರಿಗೂ ಯುಕ್ತ ರೀತಿಯ ದೈಹಿಕ ಶಿಕ್ಷಣ ಇರುತ್ತಿತ್ತು.

	ಸ್ಪಾರ್ಟನ್ನರಂತೆ ಆತೀನಿಯನ್ನರೂ ಯುದ್ಧಗಳಲ್ಲಿ ಭಾಗವಹಿಸಬೇಕಾಗಿತ್ತು.  ಆದರೆ ಅವರು ಸೌಂದರ್ಯಪ್ರಿಯರೂ ಆಗಿದ್ದರು.  ಅವರು ಸೈನಿಕ ಅವಶ್ಯಕತೆಯನ್ನು ಜೀವನದ ಈ ದೃಷ್ಟಿಯೊಡನೆ  ಸಂಯೋಜಿಸಿಕೊಂಡು ಕೇವಲ ಧೈರ್ಯ, ರಣಕೌಶಲ್ಯ, ದೇಹದಾಢ್ರ್ಯ, ಶಕ್ತಿ-ಇವುಗಳ ಜೊತೆಗೆ ಕ್ರೀಡೆ, ಸಾಹಸ, ಕಲಾಪ್ರಿಯತೆ, ಮನೋರಂಜನೆ ಇತ್ಯಾದಿ ಚಟುವಟಿಕೆಗಳಿಗೂ ಅವಕಾಶ ಕಲ್ಪಸಿಕೊಂಡಿದ್ದರು.  ಅವರು ಮಹಿಳೆಯರಿಗೂ ದೈಹಿಕ ಶಿಕ್ಷಣ ಅನಗತ್ಯವೆಂದು ಭಾವಿಸಿಕೊಂಡಿದ್ದರು.  ಅವರು ಆರಂಭಿಸಿದ ಕಲಾಮಯ ಹಾಗೂ ರಂಜನಾತ್ಮಕ ದೈಹಿಕ ಚಟುವಟಿಕೆಗಳು ಮುಂದೆ ಗ್ರೀಕರ ನೇತೃತ್ವದಲ್ಲಿ ಏರ್ಪಟ್ಟ ಒಲಿಂಪಿಕ್ ಕ್ರೀಡೋತ್ಸವಕ್ಕೆ ನಾಂದಿಯಾದವು.

	ರೋಮನ್ನರು ಯೂರೋಪಿನ ಅನೇಕ ಭಾಗಗಳನ್ನು ಗೆದ್ದು ಚಕ್ರಾಧಿಪತ್ಯವನ್ನು ಕಟ್ಟಿದ ಕಾಲದಲ್ಲಿ ಶಿಕ್ಷಣ ಮುಖ್ಯವಾಗಿ  ದೃಢಕಾಯರಾದ ಸೈನಿಕರ ತರಬೇತಿನ ಕಡೆ ಗಮನವೀಯಬೇಕಾಗಿತ್ತು.  ಅವರು ಮಕ್ಕಳಿಗೆ ಬಹು ಉಗ್ರ ರೀತಿಯ ಚಟುವಟಿಕೆಗಳನ್ನು ಗೊತ್ತುಪಡಿಸುತ್ತಿದ್ದರು.  ಓಟದ ಪಂದ್ಯ, ರಥಗಳ ಸಾರೋಟು, ಮೃಗಗಳೊಡನೆ ಕದನ, ಅಣಕು ಕದನ, ಅಪಾಯಕರಿ ಆಟಗಳು - ಇವೆಲ್ಲ ಅದರಲ್ಲಿ ಸೇರಿದ್ದುವು.  ಆದರೆ ಇವರು ಮಧ್ಯಯುಗಗಳಲ್ಲಿ ಧ್ಯಾನ, ತಪಸ್ಸು ಮುಂತಾದ ಆಧ್ಯಾತ್ಮಿಕ ವಿದ್ಯೆಗಳಿಗೆ ಮಾರುಹೋದರು.  ದೇಹದ ಅಶಾಶ್ವತ ಸ್ಥಿತಿಯನ್ನು ಲಕ್ಷಿಸಿ ಶಾಶ್ವತವೆನಿಸಿದ್ದ ಆತ್ಮದ ಉನ್ನತಿಯ ಕಡೆ ಗಮನ ಹರಿಸಿದರು.  ಇದರ ಫಲವಾಗಿ ದೈಹಿಕ ಶಿಕ್ಷಣ ಹಿಂದೆ ಬಿತ್ತು.  ಮುಂದೆ ಜರ್ಮನಿಯ ಜಾನ್ ಫ್ರಾನ್ಸನ್ನು ಗೆಲ್ಲುವ ಮಹೋದ್ದೇಶದಿಂದ ಮತ್ತೆ ಸೈನ್ಯಾಚರಣೆಗೆ ಬೇಕಾಗುವ ಯುವಜನರ ದೈಹಿಕ ಶಿಕ್ಷಣಕ್ಕೆ ಪ್ರಾಶಸ್ತ್ಯವಿತ್ತ.

	ಸ್ವೀಡನ್ನಿನ ಲಿಂಗ್ ಕವಾಯಿತಿನ ಮೂಲಕ ಸೈನಿಕರ ಶಿಸ್ತನ್ನೂ ದೇಹಬಲವನ್ನು ಉತ್ತಮಪಡಿಸುವ ಕ್ರಮವನ್ನು ಕಂಡುಕೊಂಡು ದೈಹಿಕ ಶಿಕ್ಷಣಕ್ಕೆ ಪ್ರೋತ್ಸಾಹ ಕೊಟ್ಟ.  ಇಂಗ್ಲೆಂಡು ತನ್ನ ಸುತ್ತಲೂ ಸಾಗರಗಳಿಂದ ರಕ್ಷಣೆಯಿದ್ದರೂ ದೈಹಿಕ ಶಿಕ್ಷಣಕ್ಕೆ ಗಮನವಿತ್ತಿತಾದರೂ ಮುಖ್ಯವಾಗಿ ಕವಾಯಿತಿಗೆ ಬದಲು ಕ್ರೀಡೆಗಳಿಗೆ ಪ್ರಾಶಸ್ತ್ಯ ಕೊಟ್ಟಿತು.

	ಅಮೆರಿಕಕ್ಕೆ ವಲಸೆಹೋದ ಯೂರೋಪಿನವರು ಅಲ್ಲಿ ಹೊಸದಾಗಿ ಜೀವನ ಆರಂಭಿಸಬೇಕಾಗಿತ್ತು.  ಅರಣ್ಯಗಳನ್ನು ಕಡಿದು ಮನೆ ಕಟ್ಟಿ ಹೊಲಗದ್ದೆಗಳನ್ನು ಮಾಡಬೇಕಾಗಿತ್ತು.  ಆಗ ಇವರು ಸ್ವಾಭಾವಿಕವಾಗಿ ಮರ ಕಡಿಯುವ, ಧಾನ್ಯ ಒಕ್ಕಣೆ ಮಾಡುವ, ಗುಂಡು ಹಾರಿಸುವ ಚಟುವಟಿಕೆಗಳಲ್ಲಿ ತರಬೇತು ಪಡೆಯುತ್ತಿದ್ದರು.  ಅನಂತರದ ದಿನಗಳಲ್ಲಿ ಕೇವಲ ಕೆಲಸದ ಚಟುವಟಿಕೆಗಳ ಜೊತೆಗೆ ವಿವಿಧ ಕ್ರೀಡೆಗಳೂ ಸೇರಿಕೊಂಡವು.  ಪ್ರಥಮ ಮಹಾಯುದ್ಧದಲ್ಲಿ ಸೈನಿಕರನ್ನು ಜಮಾಯಿಸುವ ಕಾಲದಲ್ಲಿ ಯುವಕರು ದೈಹಿಕವಾಗಿ ದುರ್ಬಲವಾಗಿದ್ದುದನ್ನು ಕಂಡ ಅಲ್ಲಿನ ಸರ್ಕಾರ ಶಾಸನದ ಮೂಲಕ ದೈಹಿಕ ಶಿಕ್ಷಣವನ್ನು ಕಡ್ಡಾಯ ಮಾಡಿತು.

	ಉದ್ದೇಶಗಳು : ದೈಹಿಕ ಶಿಕ್ಷಣ ಪ್ರಧಾನವಾಗಿ ದೈಹಿಕ ಚಟುವಟಿಕೆಗಳನ್ನೊಳಗೊಂಡ ಕಾರ್ಯಕ್ರಮ.  ಪರಸ್ಪರ ಸಂಬಂಧವುಳ್ಳ ಹಲವಾರು ಅಂಗವ್ಯೂಹಗಳ ಸಂಘಟನೆಯಿಂದಾಗುವ ಮಾನವನ ವ್ಯಕ್ತಿತ್ವ ನಿರೂಪಣೆಗೆ ದೈಹಿಕ ಶಿಕ್ಷಣ ಒಂದು ಪ್ರಮುಖ ಮಾರ್ಗವೆನಿಸುತ್ತದೆ.  ವ್ಯಕ್ತಿ ಶಿಕ್ಷಣದಿಂದ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಬೇಕಾಗಿದ್ದರೂ ಶಾಲಾ ವಿಷಯಗಳನ್ನೆಲ್ಲ ದೈಹಿಕ ಶಿಕ್ಷಣ ಅತ್ಯಗತ್ಯವೆನಿಸುತ್ತದೆ.  ಆದ್ದರಿಂದ ಆ ವಿಷಯವನ್ನು ಬೋಧಿಸುವ ಅಧ್ಯಾಪಕರು ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಮೂಡಿಸುವ ಪ್ರಧಾನ ಕಾರ್ಯಕರ್ತರೆನಿಸಬಲ್ಲರು.

	ಆರೋಗ್ಯ, ಮೂಲಭೂತ ಕೌಶಲ್ಯ, ವಿರಾಮದ ಸದ್ವಿನಿಯೋಗ, ನೈತಿಕ, ಸಾಮಾಜಿಕ ಮತ್ತು ಕೌಟುಂಬಿಕ ಜೀವನ ಮತ್ತು ಜೀವನೋಪಾಯದ ವೃತ್ತಿ- ಈ ಏಳು ಅಂಶಗಳು ಸಾಮಾನ್ಯ ಶಿಕ್ಷಣದ ಉದ್ದೇಶಗಳು.  ದೈಹಿಕ ಶಿಕ್ಷಣ ಸಾಮಾನ್ಯ ಶಿಕ್ಷಣದ ಅಂಗವೆಂದಮೇಲೆ ಇದರ ಉದ್ದೇಶಗಳು ಮೇಲಿನ ಉದ್ದೇಶಗಳನ್ನೂ ಪೂರೈಸಬೇಕಷ್ಟೆ, ಇದು ಹೇಗೆ ಸಾಮಾನ್ಯ ಶಿಕ್ಷಣದ ಗುರಿಯನ್ನು ಪರಿಪುಷ್ಟಿಗೊಳಿಸುವುವೆಂಬುದನ್ನು ಮುಂದೆ ಪರಿಶೀಲಿಸಿದೆ.

	ಆರೋಗ್ಯ : ಆರೋಗ್ಯ ಜೀವನಕ್ಕೆ ಅಂಗಸಾಧನೆ ಅಥವಾ ವ್ಯಾಯಾಮ ಅಗತ್ಯವೆಂಬುದು ಸ್ಪಷ್ಟವಾಗಿದೆ.  ತೀವ್ರ ವೇಗದ ಉಸಿರಾಟದಿಂದ ದೇಹಕ್ಕೆ ಅಧಿಕ ಆಮ್ಲಜನಕ ದೊರೆಯುತ್ತದೆ;  ದೇಹದ ಕಶ್ಮಲಗಳು ನಿರಾಯಾಸವಾಗಿ ಹೊರಬರುತ್ತವೆ.  ರಕ್ತಚಲನೆ ಅಧಿಕಗೊಂಡು ದೇಹಾಂಗಗಳಿಗೆ ಆಹಾರ ಪೋಷಣೆಯಾಗಿ ಅವು ಅಭಿವೃದ್ಧಿಗೊಳ್ಳುತ್ತವೆ.  ಈ ಹಲವಾರು ಜೀವಕ್ರಿಯೆಗಳನ್ನು ಮಿದುಳು ಮತ್ತು ಅದರ ನರಗಳೂ ವಿವಿಧ ಕೇಂದ್ರಗಳೂ ನಿಯಂತ್ರಿಸುತ್ತವೆ.  ವ್ಯಾಯಾಮದಿಂದ ಮೇಲಿನ ಜೀವಕ್ರಿಯೆಗಳೆಲ್ಲ ನಿರಾಯಾಸವಾಗಿ ನಡೆಯುವಂತೆ ಆಗುವುದರಿಂದ ಮಿದುಳಿಗೆ ಅಧಿಕ ಹೊರೆ ತಪ್ಪುತ್ತದೆ.

	ಶೈಶವದಿಂದ ಯೌವನದೆಡೆಗೆ ವ್ಯಕ್ತಿಯ ಬೆಳವಣಿಗೆ ಸಾಗುವಾಗ ಒಂದು ಇನ್ನೊಂದರ ಬೆಳವಣಿಗೆಯನ್ನು ಅನುಸರಿಸಿ ಸಾಗುವುದು ಕಂಡುಬಂದಿದೆ. ಈ ಪರಸ್ಪರ ಅನುಸರಣೆಯಲ್ಲಾಗುವ ಏರುಪೇರುಗಳಿಂದ ಮುಖ್ಯವಾಗಿ ಮಿದುಳು ಮತ್ತು ನರಗಳ ಮೇಲೆ ತೀವ್ರ ರೀತಿಯ ಪರಿಣಾಮವಾಗಿ ನರರೋಗಗಳು ಉದ್ಭವಿಸಬಹುದೆಂದು ಗೊತ್ತಾಗಿದೆ.  ತಕ್ಕಷ್ಟು ವ್ಯಾಯಾಮವಿಲ್ಲದೆ ಮಾನಸಿಕ ಬೆಳವಣಿಗೆಯ ಕಡೆಯೇ ಗಮನವೀಯುವ ಶಿಕ್ಷಣ ಪದ್ಧತಿಯಿಂದ ಇಂಥ ಅನರ್ಥ ಸಂಭವಿಸಬಹುದು.  ಇದನ್ನು ತಪ್ಪಿಸಲು ಸೂಕ್ತ ರೀತಿಯ ವ್ಯಾಯಾಮ ಕಾರ್ಯ ಕ್ರಮಗಳನ್ನು ಸಾಮಾನ್ಯ ಶಿಕ್ಷಣದ ಅಂಗವಾಗಿ ವ್ಯವಸ್ತೆಗೊಳಿಸುವುದು ಅಗತ್ಯವೆನಿಸುತ್ತದೆ.  ಪ್ರೌಢಿಮೆಗೇರಿ ಯೌವನ ಪೂರ್ಣವಾಗುವ ಹೊತ್ತಿಗೆ ನರವ್ಯೂಹವೂ ಪೂರ್ಣವಾಗಿ ಬೆಳೆಯುತ್ತ ಹೋಗುತ್ತದೆ.  ಆಗ ವ್ಯಾಯಾಮ ಅಗತ್ಯವೆನಿಸಿದರೂ ಶೈಶವ ಮತ್ತು ಬಾಲ್ಯಾವಸ್ಥೆಗಳಲ್ಲ ಅಗತ್ಯವೆನಿಸುವಷ್ಟು ಬೇಕೆನಿಸುವುದಿಲ್ಲ.  ವಯಸ್ಕ ಜೀವನದಲ್ಲಿ ಕ್ರಮ ಕ್ರಮವಾಗಿ ಮಾನಸಿಕ ಕಾರ್ಯಗಳ ಪ್ರಮಾಣ ಹೆಚ್ಚುತ್ತಲೂ ವ್ಯಾಯಾಮಾದಿ ದೈಹಿಕ ಕ್ರಿಯೆಗಳ ಪ್ರಮಾಣ ಕಡಿಮೆಯಾಗುತ್ತಲೂ ಹೋಗಬಹುದು.  ಎಂದರೆ ಶಾಲಾ ಜೀವನದಲ್ಲಿ ದೈಹಿಕ ಚಟುವಟಿಕೆಗಳನ್ನೊಳಗೊಂಡ ದೈಹಿಕ ಶಿಕ್ಷಣ ಮಾನಸಿಕ ಚಟುವಟಿಕೆಗಳಿಗೆ ಪೂರಕವಾಗಿರುವಂತೆ ವ್ಯವಸ್ಥೆಗೊಂಡಿದ್ದರೆ ಮಾನಸಿಕ ಶಿಕ್ಷಣಕ್ಕೆ ಬೆಂಬಲವಾಗುತ್ತದೆ.

	ನರವ್ಯೂಹ ದೇಹದ ಇತರ ಕ್ರಿಯೆಗಳನ್ನು ನಿಯಂತ್ರಿಸುವ ಸಾರ್ವಭೌಮಾಧಿಕಾರ ಹೊಂದಿದ್ದರೂ ಅದು ಸ್ಪಷ್ಟವಾಗಿರಬೇಕಾದರೆ ಇತರ ದೈಹಿಕ ಅಂಗವ್ಯೂಹಗಳ ಸೇವೆ ಅಗತ್ಯವೆನಿಸುತ್ತದೆ.  ಆಹಾರ ಪೋಷಣೆ, ರಕ್ತ ಚಲನೆ, ಉಸಿರಾಟದ ಮೂಲಕ ಆಮ್ಲಜಕನದ ಪೂರೈಕೆ, ಕಶ್ಮಲ ವಿಸರ್ಜನೆ ಇವೇ ಮುಂತಾದ ಅವಶ್ಯಕತೆ ಮೆದುಳಿಗೂ ಅದರಿಂದ ಹೊರಡುವ ನರಗಳಿಗೂ ಅಗತ್ಯವಾಗುತ್ತದೆ, ಎಂದರೆ ಶಾಲೆಯಲ್ಲಿ ಮಾನಸಿಕ ಕಾರ್ಯಗಳಿಗೆ ಮಕ್ಕಳು ಅನುವಾಗಬೇಕಾದರೆ ವ್ಯಾಯತಾಮದ ಮೂಲಕ ದೈಹಿಕ ಶಿಕ್ಷಣ ಕಾರ್ಯಗಳು ಚೆನ್ನಾಗಿ ನಡೆಯುವಂತಾಗಬೇಕು.  ಈ ದೃಷ್ಟಿಯಲ್ಲೂ ದೈಹಿಕ ಶಿಕ್ಷಣ ಮಾನಸಿಕ ಶಿಕ್ಷಣಕ್ಕೆ ಪೂರಕವೆನಿಸುತ್ತದೆ.  ದೇಹಾಂಗಗಳ ಕಾರ್ಯ ದೊಡ್ಡ ಮಾಂಸಖಂಡಗಳ ಕಾರ್ಯವನ್ನು ಒಳಗೊಂಡಿರುತ್ತದೆ.  ಅಂಗಸಾಧನೆಯಿಂದ ದೊಡ್ಡ ಮಾಂಸಖಂಡಗಳು ಕ್ರಿಯಾಮುಖವಾಗಿ ನರವ್ಯೂಹಕ್ಕೆ ಅಗತ್ಯವಾದ ಆಹಾರಾಂಶಗಳನ್ನು ಒದಗಿಸುತ್ತವೆ.

	ಯೌವನದಲ್ಲಿ ವ್ಯಕ್ತಿಯ ಆಶೋತ್ತರಗಳಿಗೂ ಅವುಗಳ ಈಡೇರಿಕೆಗೂ ನಡುವೆ ಕಾಣುವ ಅಂತರದಿಂದ ಅವರ ಮನಸ್ಸಿನಲ್ಲಿ ವಿವಿಧ ರೀತಿಯ ಉದ್ವೇಗಗಳು ರೂಪುಗೊಂಡು ಇಡೀ ವ್ಯಕ್ತಿತ್ವವನ್ನು ತಲ್ಲಣಗೊಳಿಸುವಂಥ ಮಾನಸಿಕ ಘರ್ಷಣೆ ಉಂಟಾಗಬಹುದು.  ಕೋಪ, ಭೀತಿ, ವೈಫಲ್ಯ ಈ ಮನಃಪ್ರವೃತ್ತಿಗಳ ಫಲವಾಗಿ ಆಡ್ರೀನಲ್ ಮೂಲಕ ಚೋದಕಸ್ರಾವಗಳು ದೇಹದಲ್ಲಿ ಉತ್ಪತ್ತಿಯಾಗಿ ಅವುಗಳ ವಿನಿಯೋಗಕ್ಕಾಗಿ ನರವ್ಯೂಹ ಅಧಿಕ ಶ್ರಮ ವಹಿಸಬೇಕಾಗುತ್ತದೆ.  ದೊಡ್ಡ ಮಾಂಸಖಂಡಗಳಿಗೆ ದೊರಕುವ ವ್ಯಾಯಾಮದಿಂದ ಆ ಅಂತರದ ಘರ್ಷಣೆಯ ಮೂಲವೆನಿಸುವ ಒಳತೋಟಿಯೂ ಉದ್ರೇಕವೂ ನಿವಾರಣೆಯಾಗುತ್ತವೆ.  ಅದರಿಂದ ಯೌವನದ ಹಲವು ಬಗೆಯ ದುರ್ಘಟನೆಗಳಿಗೆ ವ್ಯಾಯಾಮ ಒಂದು ರೀತಿಯ ಶಮನಕಾರಿ ಕಾರ್ಯಕ್ರಮವೆನಿಸುತ್ತದೆ.

	2. ಮೂಲಭೂತ ಕೌಶಲ್ಯ ಸಾಧನೆ : ಶಾಲೆಯಲ್ಲಿ ಮಕ್ಕಳು ತಮ್ಮ ಚಟುವಟಿಕೆಗಳಿಂದ ತಮ್ಮ ಮನಸ್ಸಿನ ಆಶೋತ್ತರಗಳನ್ನು ಈಡೇರಿಸಿಕೊಳ್ಳುವುದರ ಜೊತೆಗೆ ತಮ್ಮ ಸಹಪಾಠಿಗಳ ಮೆಚ್ಚಿಗೆಯನ್ನೂ ಪಡೆದು ನಾಯಕತನ ವಹಿಸಬಹುದು.  ಮುಂದೆ ಇದೇ ಕೌಶಲ್ಯಗಳು ವಿವಿಧ ದೈಹಿಕ ಚಟುವಟಿಕೆಗಳಿಗೂ ನೆರವಾಗುತ್ತವೆ.  ಅಂಥ ದೈಹಿಕ ಕೌಶಲ್ಯಗಳು ಬಹುಮಟ್ಟಿಗೆ ದೇಹದ ದೊಡ್ಡ ಮಾಂಸಖಂಡಗಳನ್ನವಲಂಬಿಸಿದೆ.  ದೈಹಿಕ ಶಿಕ್ಷಣ ಮುಖ್ಯವಾಗಿ ಆ ಮಾಂಸಖಂಡಗಳಿಗೆ ವ್ಯಾಯಾಮ ಒದಗಿಸುವುದರಿಂದ ಅವರಲ್ಲಿ ಸದ್ಯದಲ್ಲಿ ಅಗತ್ಯವೆನಿಸಿರುವ ಮತ್ತು ಮುಂದೆಯೂ ಅನಿವಾರ್ಯವೆನಿಸುವ ಮೂಲಭೂತ ಕೌಶಲ್ಯಗಳನ್ನು ಬೆಳೆಸುತ್ತದೆ.

	ಪ್ರೌಢಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಆ ಕೌಶಲ್ಯ ಕ್ರೀಡೆಗಳಲ್ಲಿ ಭಾಗವಹಿಸಿ ಜಯ ಗಳಿಸುವುದರ ಮೂಲಕ ತಮ್ಮಷ್ಟಕ್ಕೆ ಮನಃತೃಪ್ತಿಯನ್ನೂ ಇತರರಿಂದ ಗೌರವಾಭಿಮಾನಗಳನ್ನು ಪಡೆಯಲು ನೆರವಾಗುತ್ತದೆ.   ಮುಂದಿನ ಜೀವನದಲ್ಲಿ ಸಾಮಾಜಿಕ ಮೆಚ್ಚಿಗೆಯನ್ನು ಗಳಿಸುವುದಕ್ಕೂ ಅದರಿಂದ ಅವಕಾಶವಾಗುವುದು.

3.  ಗುಣಶೀಲಗಳ ಬೆಳವಣಿಗೆ : ಆದರಣೀಯ ವ್ಯಕ್ತಿತ್ವಕ್ಕೂ ಒಳ್ಳೆಯ ಕುಟುಂಬ ಜೀವನಕ್ಕೂ ಸತ್ಪೌರ ಜೀವನಕ್ಕೂ ಒಳ್ಳೆಯ ಗುಣ ಮತ್ತು ಅಭ್ಯಾಸವಾಗಲು ಅಗತ್ಯವೆನಿಸುತ್ತವೆ.  ಆದ್ದರಿಂದಲೆ ಎಲ್ಲ ಶಿಕ್ಷಣ ಪದ್ಧತಿಯಲ್ಲೂ ಅವನ್ನು ಶಿಕ್ಷಣದ ಪ್ರಧಾನ ಉದ್ದೇಶಗಳಾಗಿ ಸೇರಿಸಿರುವುದು.  ವಿವಿಧ ವ್ಯಾಸಂಗ ವಿಷಯಗಳ ಅಧ್ಯಯನದಲ್ಲಿ ಆ ಗುಣಗಳನ್ನು ಕುರಿತ ಸೈದ್ಧಾಂತಿಕ ಜ್ಞಾನವನ್ನು ನೀಡುವುದಾದರೆ ದೈಹಿಕ ಶಿಕ್ಷಣದಲ್ಲಿ ಆ ತತ್ತ್ವವನ್ನು ಕಾರ್ಯರೂಪದಲ್ಲಿ ಅನುಷ್ಠಾನಕ್ಕೆ ತರಲಾಗುವುದು.  ಶಿಕ್ಷಣ ಅಂಥ ಅನುಷ್ಠಾನಗಳಿಂದ ಕೂಡಿದ್ದರೆ ಮಾತ್ರ ವ್ಯಕ್ತಿಯಲ್ಲಿ ನೈತಿಕ ಜೀವನ ರೂಢಿಸುವುದೆಂಬ ಅಂಶ ಸ್ಪಷ್ಟವಾಗಿದೆ.  ವ್ಯಾಯಾಮದ ತರಗತಿ, ಆಟದ ಬಯಲು, ಗರಡಿಯ ಮನೆ, ಪಂದ್ಯಾಟಗಳು - ಇವೆಲ್ಲ ವ್ಯಕ್ತಿಯ ನೈತಿಕ ಜೀವನದ ಬೆಳವಣಿಗೆಗೆ ಒಳ್ಳೆಯ ಅಖಾಡವೆನಿಸಬಲ್ಲವು.  ಅಲ್ಲ ವ್ಯಕ್ತಿ ಹಲವಾರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ಸ್ವಹಿತಕ್ಕಿಂತ ಸಂಘದ ಹಿತಕ್ಕೆ ಪ್ರಾಧಾನ್ಯವಿತ್ತು.  ಇತರರು ತನ್ನ ಸಾಧನೆಯ ಬಗ್ಗೆ ಅಭಿಮಾನಪಡುವಂತೆ ಮಾಡಬೇಕು ಎಂಬ ಆಶೊತ್ತರಗಳಿದ ವ್ಯಕ್ತಿಯಲ್ಲಿ ಸದಭ್ಯಾಸಗಳೂ ಸದಭಿರುಚಿಗಳೂ ವರ್ಧಿಸುವಂತೆ ಮಡಿದಲ್ಲಿ ಮುಂದೆ ವ್ಯಕ್ತಿ ಒಳ್ಳೆಯ ಕುಟುಂಬ ಜೀವಿಯಾಗಿಯೂ ಒಳ್ಳೆಯ ಪೌರನಾಗಿಯೂ ಬಾಳಲು ನೆರವಾಗುತ್ತದೆ.  ದೈಹಿಕ ಶಿಕ್ಷಣ ವ್ಯಕ್ತಿಯಲ್ಲಿ ಆ ಮುಖವಾದ ಪರಿಣಾಮವನ್ನು ರೂಪಿಸಲು ವಿಶಿಷ್ಟ ರೀತಿಯಲ್ಲಿ ಸಹಾಯ ಮಾಡುತ್ತದೆ.

4.  ದುಡಿಮೆಯ ಜೀವನಕ್ಕೆ ಸಿದ್ಧತೆ : ಸಮಾಜದಲ್ಲಿ ಕರ್ತವ್ಯ ನಿರ್ವಹಿಸಲಾಶಿಸುವ ಎಲ್ಲ ಪೌರರೂ ತಮ್ಮ ಜೀವನೋಪಾಯಕ್ಕೆ ನೆರವಾಗತಕ್ಕ ವೃತ್ತಿಯೊಂದನ್ನು ಅನುಸರಿಸುವುದು ಅಗತ್ಯವಾಗುತ್ತದೆ.  ದೈಹಿಕ ಶಿಕ್ಷಣದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವುಳ್ಳ ಹಾಗೂ ದೃಢಕಾಯರೂ ಕಷ್ಟಸಹಿಷ್ಣುಗಳೂ ಆದ ವ್ಯಕ್ತಿಗಳು ರೂಪುಗೊಳ್ಳವುದರಿಂದ ಅಂಥವರು ನಿಷ್ಠೆಯಿಂದ ದುಡಿಯಬಲ್ಲರು. ಕಾರ್ಖಾನೆ ಕಾರ್ಯಾಲಯ ಅಂಗಡಿ ಮುಂಗಟ್ಟು ಹೊಲಗದ್ದೆಗಳಲ್ಲಿ ಚೆನ್ನಾಗಿ ಕೆಲಸ ಮಾಡಬಲ್ಲರು. ಆದ್ದರಿಂದ ಕೆಲಸಕ್ಕೆ ನೇಮಿಸಿಕೊಳ್ಳತಕ್ಕವರು ಕ್ರೀಡಾಪಟುಗಳಿಗೂ ದೃಢಕಾಯರಿಗೂ ಪ್ರಾಶಸ್ತ್ಯ ನೀಡುವುದು.  ಎಂದರೆ ದೈಹಿಕ ಶಿಕ್ಷಣದಿಂದ ವ್ಯಕ್ತಿ ಜೀವನೋಪಾಯಕ್ಕೆ ಅನುಸರಿಸುವ ವೃತ್ತಿನಿರತರಾಗಬಹುದು.             (ಎಂ.ಟಿ.ವಿ.)
ದೈಹಿಕ ಶಿಕ್ಷಣ ಸಾಮಾನ್ಯ ಶಿಕ್ಷಣದ ಉದ್ದೇಶಗಳನ್ನು ತಳೆದಿದ್ದು ಅದರಿಂದ ದೊರೆಯಲಾರದ ಕೆಲವು ವಿಶಿಷ್ಟ ಅಂಶಗಳನ್ನು ದೊರಕಿಸುವುದರ ಮೂಲಕ ಶಿಕ್ಷಣದ ವಿಶಿಷ್ಟವೂ ಅವಿಭಾಜ್ಯವು ಆದ ಅಂಗವೆನಿಸಿದೆಯೆಂಬುದು ಮೇಲಿನ ವಿವರಣೆಗಳಿಂದ ಸ್ಪಷ್ಟವಾಗುತ್ತದೆ.

ದೈಹಿಕ ಶಿಕ್ಷಣದ ಕಾರ್ಯಕ್ರಮ :  ದೈಹಿಕ ಶಿಕ್ಷಣದ ಕಾರ್ಯಕ್ರಮ ದೈಹಿಕವಾಗಿ ನೀಡುವ ದೈಹಿಕ ಶಿಕ್ಷಣ.  ಆಂತರಿಕ ಕ್ರೀಡೆಗಳು ಮತ್ತು ಅಂತರ ಶಾಲಾಕ್ರೀಡೆಗಳು ಈ ಮೂರು ಪ್ರಮುಖ ವಿಭಾಗಗಳಲ್ಲಿ ಕಾಣಸಿಗುತ್ತದೆ.  ಈ ಮೂರು ಮುಖಗಳಲ್ಲೂ ಶಿಕ್ಷಣ ಇರುವುದಾದರೂ ಪ್ರಥಮ ಮುಖದಲ್ಲಿ ಮೂಲಭೂತ ಚಟುವಟಿಕೆಗಳ ಶಿಕ್ಷಣವನ್ನು ನೀಡಲಾಗುವುದು.  ಇದರಲ್ಲಿ ಕವಾಯಿತು, ಓಡುವುದು, ನೆಗೆಯುವುದು, ಈಜುವುದು, ಎಸೆಯುವುದು, ಬೆಟ್ಟ ಹತ್ತುವುದು ಮುಂತಾದ ದೈಹಿಕ ಚಟುವಟಿಕೆಗಳ ಜೊತೆಗೆ ವಿವಿಧ ಆಟಗಳೂ ಸೇರುತ್ತದೆ.  ಆಗ ದೊರೆತ ಶಿಕ್ಷಣ ಆಂತರಿಕ ಮತ್ತು ಅಂತರ ಶಾಲಾ ಪಂದ್ಯಾಟಗಳಲ್ಲಿ ಭಾಗವಹಿಸುವ ಯೋಗ್ಯತೆಯನ್ನು ದೊರಕಿಸುವುದಾದರೂ ಆ ಅಂಶಗಳಿಗೂ ಪ್ರತ್ಯೇಕ ಶಿಕ್ಷಣ ಅಗತ್ಯವೆನಿಸುತ್ತದೆ.
ಪಠ್ಯಕ್ರಮ : ಶಾಲಾಕಾಲೇಜುಗಳ ಇತರ ಅಧ್ಯಯನ ವಿಷಯಗಳಂತೆ ದೈಹಿಕ ಶಿಕ್ಷಣ ತನ್ನದೇ ಆದ ಪಠ್ಯವಿಷಯವನ್ನು ಒಳಗೊಂಡಿರುತ್ತದೆ.  ಅದನ್ನು ರೂಪಿಸುವಾಗ ಸಾಮಾಜಿಕ ತತ್ತ್ವ ದೃಷ್ಟಿ, ಶೈಕ್ಷಣಿಕತತ್ತ್ವದೃಷ್ಟಿ ಮಕ್ಕಳ ಸ್ವಭಾವ ದೈಹಿಕ ಶಿಕ್ಷಣದ ವಿಶಿಷ್ಟ ಉದ್ದೇಶ ಆ ಉದ್ದೇಶಗಳ ಈಡೇರಿಕೆಗೆ ಸೂಕ್ತವೆನಿಸುವ ಚಟುವಟಿಕೆಗಳು, ಆಡಳಿತವರ್ಗ ಒದಗಿಸಬಲ್ಲ ಸೌಲಭ್ಯಗಳು ಈ ಅಂಶಗಳನ್ನೆಲ್ಲ ಆಧಾರ ಮಾಡಿಕೊಳ್ಳಬೇಕಾಗುತ್ತದೆ.  ಹೀಗೆ ರೂಪುಗೊಳಿಸಿದ ಪಠ್ಯಕ್ರಮ ಮಕ್ಕಳ ದೊಡ್ಡ ಮಾಂಸಖಂಡಗಳು ಕಾರ್ಯಪ್ರವೃತ್ತವಾಗುವಂಥ ಬಗೆಬಗೆಯ ಚಟುವಟಿಕೆಗಳನ್ನು ಒಳಗೊಂಡಿರಬೇಕು.  ಮಕ್ಕಳ ಬೆಳವಣಿಗೆಯಲ್ಲಿ ಕಂಡುಬರುವ ಅಂತಸ್ತುಗಳಿಗೆ ಅನುಕ್ರಮವಾಗಿ ಆ ಚಟುವಟಿಕೆಗಳನ್ನು ಜೋಡಿಸಿರಬೇಕು.  ಮಕ್ಕಳಲ್ಲಿ ವೈಯಕ್ತಿಕ ಭೇದಗಳಿರುವುದರಿಂದ ಕಾರ್ಯಕ್ರಮಗಳು ಆ ವ್ಯತ್ಯಾಸಗಳಿಗೆ ಅವಕಾಶವೀಯುವಂತೆಯೂ ಇರಬೇಕು.  ಕಾರ್ಯಕ್ರಮಗೂ ಬಹುಮಟ್ಟಿಗೆ ಸ್ವಾಭಾವಿಕ ಆಟಗಳ ರೂಪದ ಚಟುವಟಿಕೆಗಳನ್ನು ಒಳಗೊಂಡಿರಬೇಕು.  ಬೇರೆ ಬೇರೆ ವಯೋಮಾನದ ಮಕ್ಕಳ ಸ್ವಭಾವಾದಿ ಗುಣಗಳಿಗೆ ಅನುಗುಣವಾಗಿಯೂ ಇರಬೇಕು.  ಬೋಧಿಸುವ ಚಟುವಟಿಕೆಗಳು ಅಭ್ಯಾಸವಾದಂತೆ ಪುನರಾವರ್ತನೆಗೆ ಅವಕಾಶವಿರಬೇಕು. ಮುಂದೆ ವ್ಯಕ್ತಿ ಹೆವ್ಯಾಸವಾಗಿ ಅನುಸರಿಸಬಹುದಾದ ಚಟುವಟಿಕೆಗಳೂ ತಕ್ಕಮಟ್ಟಿಗೆ ಸೇರಿರಬೇಕು.  ಸಮಕಾಲೀನ ಸಮಾಜದ ದೃಷ್ಟಿ, ರುಚಿ, ಪೌರಜೀವನದ ಸ್ವರೂಪ, ವ್ಯಕ್ತಿಯ ಗುಣಶೀಲ ನರೂಪಣೆ, ಸಾಂಘಿಕ ಜೀವನ ದೃಷ್ಟಿ-ಇವೆಲ್ಲವನ್ನು ಪ್ರೋತ್ಸಾಹಿಸುವಂತಿರಬೇಕು.

ಹೆಣ್ಣು ಮತ್ತು ಗಂಡುಮಕ್ಕಳಿಗೆ ಪಠ್ಯಕ್ರಮದಲ್ಲಿ ವ್ಯತ್ಯಾಸ ಇರಬೇಕಾಗುತ್ತದೆ.  ಮೇಲಿನ ಆಧಾರಗಳನ್ನೂ ಅನುಸರಿಸಿ ಚಟುವಟಿಕೆಗಳನ್ನು ಆರಿಸಿ ಯುಕ್ತರೀತಿಯಲ್ಲಿ ಅಳವಡಿಸುವಾಗ ಬಾಲಕ ಬಾಲಕಿಯರಿಗೆ ಒಪ್ಪುವಂಥ ಹಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.  ಗಂಡು ಹೆಣ್ಣುಗಳಲ್ಲಿ ಕಂಡುಬರುವ ಅಂಗರಚನೆ, ಶಾರೀರಕ ಕ್ರಿಯೆ, ಮಾನಸಿಕ ಸ್ವರೂಪ ಮುಂತಾದ ಭಿನ್ನತೆಗಳಿಗೆ ಅನುಗುಣವಾಗಿರುವಂತೆ ಪಠ್ಯಕ್ರಮಗಳಲ್ಲಿ ವ್ಯತ್ಯಾಸ ಕಲ್ಪಿಸಬೇಕಾಗುತ್ತದೆ.  10ನೆಯ ವಯಸ್ಸಿನವರೆಗೆ ಈ ದೈಹಿಕ ಬದಲಾವಣೆಗಳು ಅಷ್ಟಾಗಿ ಕಾಣಿಸಿಕೊಳ್ಳಲಾರವು.  ಅನಂತರ ಬಾಲಕಿಯರು ಬಾಲಕರೊಡನೆ ಓಟ, ನೆಗೆತ ಮುಂತಾದ ಕಠಿಣ ಚಟುವಟಿಕೆಗಳಲ್ಲಿ ಪಾತ್ರವಹಿಸಲಾರರು.  ಹಿಂದೆ, ಆ ವಯೋಮಾನದ ಅನಂತರ ಬಾಲಕಿಯರಲ್ಲಿ ಕಟಿ ಅಥವಾ ನಡುವಿನ ಭಾಗ ವಿಸ್ತರಿಸಿಕೊಳ್ಳವುದರ ಫಲವಾಗಿ ತೊಡೆಯ ಮೂಳೆಗಳು, ಓರೆಯಾಗುವಂತಾಗಿ ಓಡಲು ಅಷ್ಟು ಸೌಲಭ್ಯವಿಲ್ಲದ್ದಾಗುವುದೆಂದು ನಂಬಲಾಗಿತ್ತು. ಆದರೆ ಇಂದು ಅದು ಅಂಥ ಪ್ರಬಲ ಕಾರಣವಲ್ಲವೆಂಬ ಅಂಶವನ್ನು ಅಯೋನಾದಲ್ಲಿ ಈಚೆಗೆ ನಡೆದ ಸಂಶೋಧನೆಗಳು ಸೂಚಿಸಿದೆ.  ಆದರೂ ಅಷ್ಟಾಗಿ ಅಭ್ಯಾಸವಿಲ್ಲದಿರುವದೂ ತೋಳಿನ ಮತ್ತು ದೇಹದ ಇತರ ಮೇಲುಭಾಗಗಳು ಅಷ್ಟಾಗಿ ವೃದ್ದಿಯಾಗದಿರುವುದೂ ಈ ಭಿನ್ನತೆಗೆ ಕಾರಣವೆಂದು ಅದು ಸೂಚಿಸಿದೆ.  ಅವರ ಮಂಡಿ ಬಾಲಕರಲ್ಲಿರುವಷ್ಟು ಅಗಲವಾಗಿ ಬೆಳೆದರೂ  ಮೊಳಕೈ ಅಷ್ಟು ವೃದ್ದಿಯಾಗದಿರುವುದು ಅವರ ಕಾಲುಗಳು ಬಾಲಕರ ಕಾಲುಗಳಷ್ಟು ಬಲವಾಗಿ ಬೆಳೆದರೂ ಅವರ ಕೈಗಳು ಆ ಮಟ್ಟಿಗೆ ಬೆಳೆಯುವುದಿಲ್ಲ.  ಎಡ ಮತ್ತು ಬಲ ತೋಳುಗಳು ಹಾಗೂ ಪೃಷ್ಠದ ಮೇಲುಭಾಗದ ಶಕ್ತಿಯಲ್ಲೂ ಅವರು ಸಮವಯಸ್ಸಿನ ಬಾಲಕರಿಗಿಂತ ಹಿಂದುಳಿದಿರುತ್ತಾರೆ.  ಎದೆಯ ವಿಸ್ತ್ರೀರ್ಣದಲ್ಲೂ ಹೃದಯದ ಗಾತ್ರದಲ್ಲೂ ಶ್ವಾಸಕೋಶಗಳ ವಾಯುಪ್ರದೇಶದ ಒಳ ಅಳತೆಯಲ್ಲೂ ಅವರು ಬಾಲಕರೊಡನೆ ಸರಿದೂಗಲಾರರು.  ಆದ್ದರಿಂದ ಅವರು ಬಾಲಕರಷ್ಟು ಕಷ್ಟಸಹಿಷ್ಣುಗಳಾಗಿಸುವುದಿಲ್ಲ.

ಮೇಲಿನ ದೈಹಿಕ ಪರಿಮಿತಿಗಳ ಜೊತೆಗೆ ಹಲವು ಇತರ ಲೈಂಗಿಕ ಲಕ್ಷಣಗಳೂ ಬಾಲಕಿಯರಿಗೆ ಪ್ರತ್ಯೇಕ ಕಾರ್ಯಕ್ರಮಗಳು ಅಗತ್ಯವೆಂಬುದನ್ನು ಸೂಚಿಸುತ್ತದೆ.  ಪ್ರೌಢಿಮೆಯನ್ನು ಮುಟ್ಟಿದ ಅನಂತರ ಬಾಲಕಿಯರು ನಿಯತಕಾಲಕ್ಕೆ ಬಹಿಷ್ಠೆಯರಾಗುವುದರಿಂದ ಅವರಿಗೆ ಪ್ರತ್ಯೇಕ ತರಗತಿಯೇ ಅಗತ್ಯವೆಸಿಸುತ್ತದೆ.  ಆ ಕಾಲದಲ್ಲಿ ಅತಿಯಾದ ಅಂಗಸಾಧನೆ ಅವರ ಆರೋಗ್ಯಕೆ ಅಪಾಯಕಾರಿಯೆಂಬ ಅಂಶವನ್ನು ವೈದ್ಯಕೀಯ ಸಂಶೋಧನೆಗಳು ಸೂಚಿಸಿವೆ.  ಪ್ರೌಢಮೆಯ ಫಲವಾಗಿ ಬಾಲಕ ಬಾಲಕಿಯರ ಮಾನಸಿಕ ಪ್ರವೃತ್ತಿಗಳಲ್ಲೂ ಭಿನ್ನತೆ ತಲೆದೋರಿ ಅವರು ಇಚ್ಛಿಸುವ ಚಟುವಟಿಕೆಗಳ ಒಲವಿನಲ್ಲೂ ವ್ಯತ್ಯಾಸ ಕಂಡುಬರುತ್ತದೆ.  ಯುವತಿಯರು ಸಾಮೂಹಿಕ ನೃತ್ಯದಲ್ಲಿ ಆಸಕ್ತಿ ತೊರಿದರೆ ಯುವಕರು ಕಾದಾಟವೇ ಪ್ರಧಾನವಾಗಿರುವ ಸ್ಪರ್ಧೆಯ ಚಟುವಟಿಕೆಗಳಲ್ಲಿ ಆಸಕ್ತಿ ತೋರುವರು.  ಮಹಿಳೆಯರಿಗೆ ಅವು ವಿಹಿತವಲ್ಲದ ಚಟುವಟಿಕೆಗಳೆಂದು ನಂಬಿರುವುದು ಇದಕ್ಕೆ ಮೂಲಕಾರಣ ಇನ್ನು ಕೆಲವು ಚಟುವಟಿಕೆಗಳು ಯುವಕ ಯುವತಿಯರಿಬ್ಬರಿಗೂ ಸರಿಹೋಗಬಲ್ಲವಾದರೂ ಆ ಚಟುವಟಿಕೆಗಳಲ್ಲಿ ಭಾಗವಹಿಸಬಹುದಾದ ಕಾಲದ ಪ್ರಮಾಣದಲ್ಲೂ ಅದನ್ನು ವ್ಯವಸ್ಥೆಗೊಳಿಸುವ ರೀತಿಯಲ್ಲೂ ಭಿನ್ನತೆ ಇರಬೇಕಾದ್ದು ಅಗತ್ಯವೆನಿಸುತ್ತದೆ.  ಆದ್ದರಿಂದ 9-10 ನೆಯ ವರ್ಷದಿಂದ ಕಾಲೇಜಿನ ವಯಸ್ಸಿನ (16) ವರೆಗೆ ಅವರಿಗೆ ಪ್ರತ್ಯೇಕ ಪಠ್ಯಕ್ರಮವೂ ಪ್ರತ್ಯೇಕ ತರಗತಿಗಳೂ ಅಗತ್ಯ.

   ಪ್ರೌಢಶಾಲೆಯ ಅನಂತರ ಯುವತಿಯರು ಪ್ರೌಢಿಮೆಯ ತೀವ್ರತೆಗೆ ಒಗ್ಗಿದವರಾಗಿ ಯುವಕರು ಪಾತ್ರವಹಿಸುವ ಚಟುವಟಿಕೆಗಳಲ್ಲಿ ಅವರ ಜೊತೆಗೆ ಭಾರವಹಿಸುವ ಆಸಕ್ತಿ ತಳೆಯುವರು.  ಅವರೊಡನೆ ಸ್ಪರ್ಧಿಸುವ ಮನೋಭಾವವನ್ನೂ ಧೈರ್ಯವನ್ನೂ ಬೆಳೆಸಿಕೊಳ್ಳುವರು.  ಈಚಿನ ಸಾಮಾಜಿಕ ಬದಲಾವಣೆಗಳ ಹಾಗೂ ನೂತನವಾಗಿ ತಮಗೆ ದೊರೆತಿರುವ ಸಮಾನತೆಯ ಸೌಲಭ್ಯಗಳಿಂದ ಅವರಲ್ಲಿ ಕ್ರೀಡಾಸಕ್ತಿ, ಸರಸ ಪ್ರವೃತ್ತಿ (ಸ್ಪೋಟ್ರ್ಸಮಷಿಪ್) ಸಹಕಾರ.  ಸಂಯಮ-ಇವೆಲ್ಲ ವರ್ಧಿಸುತ್ತಿವೆ.  ಯುವತಿಯರೂ ದೊಡ್ಡ ಮಾಂಸಖಂಡಗಳು ಕಾರ್ಯಮುಖವಾಗುವ ಕ್ರೀಡೆಗಳಲ್ಲೂ ಭಾಗವಹಿಸಲು ಆಸಕ್ತಿ ಹೊಂದಿರುವರು.  ಮಹಿಳೆಯರು ರಾಜಕೀಯ ಆರ್ಥಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಆರಂಭಿಸಿರುವ ಈ ಕಾಲದಲ್ಲಿ ಹಿಂದಿನ ಶಿಕ್ಷಣ ಪ್ರಪಂಚ ಅಅವರ ಭಾಗಕ್ಕೆ ಮೊಟಕು ಮಾಡಿದ್ದ ದೈಹಿಕ ಶಿಕ್ಷಣದ ಚಟುವಟಿಕೆಗಳನ್ನು ಈಗ ಸೇರಿಸಿಕೊಳ್ಳುವುದು ಅಗತ್ಯವಾಗಿದೆ.

    ದೈಹಿಕ ಶಿಕ್ಷಣಕ್ಕೆ ಅಗತ್ಯವೆನಿಸುವ ಕಾಲದ ಪ್ರಮಾಣ : ಹಿಂದೆ ದೈಹಿಕ ಶಿಕ್ಷಣಕ್ಕೆ ಶಾಲಾಕಾಲೇಜುಗಳಲ್ಲಿ ವಾರಕ್ಕೆ ಒಂದೆರಡು ದಿನಗಳನ್ನು ಗೊತ್ತುಪಡಿಸಿ ಪ್ರತಿದಿನ ಒಂದೊಂದು ಗಂಟೆಯಂತೆ ವಿನಿಯೋಗಿಸಲಾಗುತ್ತಿತ್ತು.  ಎರಡನೆಯ ಮಹಾಯುದ್ದಕ್ಕೆ ಸೈನಿಕರನ್ನು ಭರ್ತಿಮಾಡುವಾಗ ಯುವಕರ ದೈಹಿಕ ದೌರ್ಬಲ್ಯದ ದತೀವ್ರತೆಯನ್ನು ಕಂಡ ಮೇಲೆ ದೈಹಿಕ ಶಿಕ್ಷಣಕ್ಕೆ ಹೆಚ್ಚುಕಾಲ ವಿನಿಯೊಗಿಸಬೇಕೆಂಬ ಭಾವನೆ ಬೆಳೆದು ಪ್ರತಿನಿತ್ಯ ಶಾಲಾಕಾಲಾವಧಿಯಲ್ಲೇ ಒಂದು ಗಂಟೆಯ ಅವಧಿಯನ್ನು (ಪೀರಿಯಡ್) ಅದಕ್ಕಾಗಿ ಬಳಸುವುದು ಪ್ರಚಾರಕ್ಕೆ ಬಂದಿದೆ ಆದರೆ ಆ ಕಾಲವನ್ನು ಅನೇಕ ಕಡೆ ಸದ್ವಿನಿಯೋಗಪಡಿಸಿಕೊಳ್ಳದೆ ಯಾವುದೋ ಸಂಪ್ರದಾಯದ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸುತ್ತಿರುವುದು ಕಂಡು ಬರುತ್ತದೆ.  ಪ್ರತಿನಿತ್ಯ ಒಂದೇ ಚಟುವಟಿಕೆಯಲ್ಲಿ ತೊಡಗಿಸುವುದಾಗಲಿ ಕೇವಲ ನಿರ್ದೇಶನವೇ ಇಲ್ಲದೆ ಮಕ್ಕಳನ್ನು ಭಾಗವಹಿಸಲು ಬಿಡುವುದಾಗಲಿ ದೈಹಿಕ ಶಿಕ್ಷಣದ ನಿಜವಾದ ಉದ್ದೇಶವನ್ನು ಸಾಧಿಸಲಾರದು. ದೈಹಿಕ ಶಿಕ್ಷಣದ ಅಧ್ಯಾಪಕರು ಕಾಟಾಚಾರದ ಕವಾಯಿತು ಮಾಡಿಸಿ ಕಾಲಹಾಕುವುದೂ ಅಷ್ಟೇ ವೈಫಲ್ಯಕ್ಕೆ ಕಾರಣವೆನಿಸುತ್ತದೆ.  ಇರತಕ್ಕ ಕಾಲಾವಕಾಶವನ್ನು ಫಲದಾಯಕವಾದ ಹಾಗೂ ಸಂಕಿರ್ಣ ಸ್ವರೂಪದ ಚಟುವಟಿಕೆಗಳಿಗಾಗಿ ವಿನಿಯೋಗಿಸಬೇಕು.  ಮುಖ್ಯವಾಗಿ ಅಧಿಕೃತವಾಗಿ ತೋರಿಸಿರುವ ಕಾಲವನ್ನು ಪೂರ್ಣವಾಗಿ ಚಟುವಟಿಕೆಗಳ ಶಿಕ್ಷಣಕ್ಕಾಗಿ ಬಳಸಬೇಕು.  ವಿದ್ಯಾರ್ಥಿಗಳು ಶಾಲಾನಂತರ ಅಂಥ ಆಟ ಅಥವಾ ಚಟುವಟಿಕೆಗಳಲ್ಲಿ ನಿರತರಾಗಿ ಅವನ್ನು ಚೆನ್ನಾಗಿ ಅಭ್ಯಾಸಮಾಡಿಕೊಳ್ಳಬಲ್ಲರು.

   ಬೇರೆ ಬೇರೆ ಅಂತಸ್ತಿನಲ್ಲಿ ದೈಹಿಕ ಶಿಕ್ಷಣದ ಕಾರ್ಯಕ್ರಮ : ದೈಹಿಕ ಶಿಕ್ಷಣದ ಪಠ್ಯಕ್ರಮವನ್ನು ರಚಿಸುವ ಬಗ್ಗೆ ಮೇಲೆ ವಿವರವಾದ ನೀತಿಯನ್ನು ನಿರೂಪಿಸಿದೆ.  ಆದರೆ ಅದು ವಯೋಮಾನಕ್ಕೆ ತಕ್ಕಂತೆಯೂ ಇರಬೇಕು.  ದೈಹಿಕ ಶಿಕ್ಷಣ ಸಾಧಿಸಬೇಕಾದ ಉದ್ದೇಶಗಳನ್ನು ಸ್ಥೂಲವಾಗಿ ಸೂಚಿಸಿದ್ದರೂ ವಾಯುಗುಣಕ್ಕೆ ತಕ್ಕಂತೆ ವಿಶಿಷ್ಯ ಅಂಶಗಳ ಸಾಧನೆಗೆ ಪ್ರಾಧಾನ್ಯವಿರುತ್ತದೆ.  ಆದ್ದರಿಂದ ಉದ್ದೇಶ ಮತ್ತು ಕಾರ್ಯಕ್ರಮಗಳ ಸೂಕ್ತತೆ ಇವೆರಡೂ ದೃಷ್ಟಿಗಳಿಂದ ವಯೋಗುಣಕ್ಕೆ ತಕ್ಕಂತೆ ಪಠ್ಯಕ್ರಮವನ್ನು ರೂಪಿಸುವುದು ಅಗತ್ಯ. 

   ಪ್ರಾಥಮಿಕ ಶಾಲಾಮಟ್ಟದ ಕಾರ್ಯಕ್ರಮ : ಪ್ರಾಥಮಿಕ ಹಂತದ ಮೊದಲ ತರಗತಿಗಳಲ್ಲಿ ಕಠಿಣವೂ ದೀರ್ಘಾವಧಿಯವು ಆದ ಚಟುವಟಿಕೆಗಳು ಯುಕ್ತವಲ್ಲ ಆ ವಯೋಮಾನದ ಮಕ್ಕಳು ತುಂಬ ಚಟುವಟಿಕೆಯನ್ನು ಪ್ರದರ್ಶಿಸಿದರೂ ಅವರಿಗೆ ಅದಿಂಗಂದಿಗೆ ವಿರಾಮ ಅಗತ್ಯ.  ಜೊತೆಗೆ ಆಗಾಗ ಚಟುವಟಿಕೆಗಳನ್ನು ಬದಲಾಯಿಸುತ್ತಲೂ ಇರಬೇಕು ತಾಳಬದ್ದ ಚಟುವಟಿಕೆಗಳು ಹೆಚ್ಚಾಗಿ ಸೇರಿರಬೇಕು.  ಆ ಮೂಲಕ ಅವರಿಗೆ ಮನೋಲ್ಲಾಸ ದೊರಕುವುದರ ಜೊತೆಗೆ ಚಲನಕೌಶಲ್ಯವು ವರ್ಧಿಸುವುದು. ಸಂಗೀತಾಭಿರುಚಿ ಅಂಗಭಂಗಿಗಳ ಮೂಲಕ ಮನೋಭಾವಗಳ ಅಭಿವ್ಯಕ್ತಿ. ವರ್ತನೆಯಲ್ಲಿ ಸಮನ್ವಯ ಮತ್ತು ನಯನಾಜೋಕು-ಇವೆಲ್ಲ ವರ್ಧಿಸುತ್ತವೆ.  ಆಟಗಳನ್ನೂ ಈ ಹಂತದಲ್ಲಿ ಸೇರಿಸಬಹುದು.  ಈ ವಯಸ್ಸಿನ ಬಾಲಕ ಬಾಲಕಿಯರು ಒಟ್ಟಿಗೆ ದೈಹಿಕ ಶಿಕ್ಷಣದ ಚಟುವಟಿಕೆಗಳಲ್ಲಿ ಭಾಗಬಹಿಸಬಹುದು.

    ಹಿರಿಯ ಪ್ರೌಢಶಾಲೆಯ ಅಂತಸ್ತಿನಲ್ಲಿ ತಾಳಬದ್ದ ಚಟುವಟಿಕೆಯ ಕಾರ್ಯ ಕ್ರಮಗಳನ್ನುಳಿದ ಇತರ ಕಾರ್ಯಕ್ರಮಗಳು ಬಾಲಕ ಬಾಲಕಿಯರಿಗೆ ಬೇರೆ ಬೇರೆ ಇರುವುದು ಅಗತ್ಯ. ಪ್ರೌಢಿಮೆಗೆ ಪೂರ್ವದ ಈ ವಯೋಮಾನದ ಮಕ್ಕಳಲ್ಲಿ ಅಧಿಕ ಚಟುವಟಿಕೆ ಹೋರಾಟದ ಪ್ರವೃತ್ತಿ ನಾಯಕತನ ವಹಿಸುವ ಆಸಕ್ತಿ ಕಂಡುಬರುತ್ತದೆ.  ವ್ಯವಸ್ಥಿತ ಆಟಗಳಲ್ಲಿ ಅವರನ್ನು ತೆಡಗಿಸುವುದು ಅಗತ್ಯ.  ಸಾಮೂಹಿಕ ಆಟಗಳಲ್ಲೂ ಮನೋರಂಜನ ಚಟುವಟಿಕೆಗಳಲ್ಲು ಭಾಗವಹಿಸುವಂತೆ ಮಾಡಬೇಕು.  ಬಾಲಕಿಯರು ಆಟಗಳಲ್ಲಿ ಆಸಕ್ತಿ ತೋರಿದರೂ ತಾಳಬದ್ದ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತಳೆದಿರುವುದರಿಂದ ಅವರಿಗೆ ನೃತ್ಯ.  ಅಭಿನಯ, ಗೀತೆ ಮುಂತಾದ ಕಾರ್ಯಕ್ರಮಗಳನ್ನೊದಗಿಸಬಹುದು.

    ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣದ ಕಾರ್ಯಕ್ರಮ : ಬಾಲ್ಯದ ಹೊಸ್ತಿಲನ್ನು ದಾಟಿ ಯೌವನಕ್ಕೆ ಕಾಲಿಡುವ ಈ ವಯೊಮಾನದಲ್ಲಿ ಯುವತಿಯರನ್ನು ಯುವಕರಿಂದ ಪ್ರತ್ಯೇಕಿಸಿ ಅವರಿಗೊಪ್ಪುವ ಚಟುವಟಿಕೆಗಳಲ್ಲಿ ತೊಡಗಿಸುವುದು ಅಗತ್ಯ.

   ಈ ವಯೋಮಾನದಲ್ಲಿನವರಲ್ಲಿ ದೈಹಿಕ ಮಾನಸಿಕ, ಸಾಮಾಜಿಕವೆನ್ನಬಹುದಾದ ತೀವ್ರ ರೀತಿಯ ಬದಲಾವಣೆಗಳಾಗುತ್ತಿರುತ್ತದೆ.  ದೈಹಿಕ ಶಕ್ತಿ ವರ್ಧಿಸಿದ್ದು ಸಾಹಸಕಾರ್ಯಗಳಲ್ಲಿ ತೊಡಗುವ ಆಸಕ್ತಿ ಬೆಳೆದಿರುತ್ತದೆ.  ಜೊತೆಗೆ ವೈಯಕ್ತಿಕ ಭಿನ್ನತೆಗಳು ತೀವ್ರಗೊಂಡು ವಿಭಿನ್ನ ಆಸಕ್ತಿಗಳು ಹುಟ್ಟಿಗೊಂಡಿರುತ್ತವೆ.  ಸಾಮಾಜಿಕ ಮೆಚ್ಚಿಗೆ ಗಳಿಸುವ ಆಕಾಂಕ್ಷೆ ಬಲವಾಗಿರುತ್ತದೆ.  ಆದ್ದರಿಂದ ಸಾಮೂಹಿಕ ಹಾಗೂ ವ್ಯವಸ್ಥಿತ ರೀತಿಯ ಕ್ರೀಡೆಗಳಲ್ಲಿ ಅವರನ್ನು ತೊಡಗಿಸಬೇಕು.  ವೈಯಕ್ತಿಕ ಆಶೋತ್ತರಗಳಿಗೆ ಅನುಗುಣವಾದ ಆಟಪಾಟಗಳಲ್ಲಿ ತೊಡಗಿಸಬೇಕು.  ಕ್ರೀಡಾಕೂಟದಲ್ಲಿ ನಾಯಕರನ್ನು (ಕ್ಯಾಪ್ಟನ್) ಆರಿಸುವುದರಲ್ಲಿ ಭಾಗವಹಿಸಲು ಎಲ್ಲರಿಗೂ ಅವಕಾಶವೀಯಬೇಕು.

   ಹಿರಿಯ ಪ್ರೌಢಶಾಲೆ ಅಥವಾ ಜೂನಿಯರ್ ಕಾಲೇಜಿನ ಅಂತಸ್ತಿನಲ್ಲಿ ದೈಹಿಕ  ಶಿಕ್ಷಣದ ಕಾರ್ಯಕ್ರಮ: ಕಿರಿಯ ಪ್ರೌಢಶಾಲೆಯ ವಯೋಮಾನದ ತರುಣರಲ್ಲಿ ಆರಂಭವಾದ ತಾರುಣ್ಯದ ಸ್ಪುರಣ ಇಲ್ಲಿ ಮುಂದುವರಿಯುತ್ತಿರುತ್ತದೆ.  ದೈಹಿಕ ಶಿಕ್ಷಣದ ಅರ್ಧ ಕಾಲವನ್ನು ದೊಡ್ಡ ಮಾಂಸಖಂಡಗಳನ್ನೊಳಗೊಂಡ ಚಟುವಟಿಕೆಗಳಿಗೂ ಇನ್ನರ್ಧವನ್ನು ಅಭ್ಯಾಸದ ಚಟುವಟಿಕೆಗಳಿಗೂ ಮೀಸಲಿಡಬಹುದು.  ಹಿಂದಿಗಿಂತ ಹೆಚ್ಚು ವ್ಯವಸ್ಥಿತ ರೀತಿಯ ಕ್ರೀಡೆಗಳಲ್ಲೂ ಪಂದ್ಯಾಟಗಳಲ್ಲು ತೊಡಗಿಸಬಹದು.  ವೈಯಕ್ತಿಕ ಅಭಿರುಚಿಯಂತೆ ಅವರವರು ಆಶಿಸುವ ಆಟಗಳಲ್ಲಿ ಭಾಗವಹಿಸಲು ಅವಕಾಶವಿಯುವುದು ಅಗತ್ಯ.  ಯುವತಿಯರೂ ಸ್ಪರ್ಧಾಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬಹುದು.  ಆದರೆ ಅವರಲ್ಲಿ ತಾಳಬದ್ದ ಚಟುವಟಿಕೆಯ ನೃತ್ಯಾಭಿಯಾದಿಗಳಿಗೆ ಸೌಲಭ್ಯ ಕಲ್ಪಿಸಬಹುದು.  ಯುವಕರಿಗೆ ಉಪಕರಣಾದಿಗಳನ್ನು ಬಳಸಿಕೊಂಡು ವ್ಯಾಯಾಮಗಳಲ್ಲಿ ಪಾತ್ರವಹಿಸಲು ಅವಕಾಶ ಕಲ್ಪಿಸಿಬೇಕು.  ಅಗತ್ಯವೆನಿಸುವ ಅಭ್ಯಾಸಕ್ಕಾಗಿ (ಪ್ರಾಕ್ಟೀಸ್ ಸರ್ವಿಸ್) ವಾರದ ಒಟ್ಟು ಕಾಲವನ್ನು ಕ್ರೀಡಾ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು.  ಪಂದ್ಯಾಟಗಳಲ್ಲಿ ಭಾಗವಹಿಸುವವರ ಭಾಗಕ್ಕೆ ಇದು ಅನಿವಾರ್ಯವೇ ಆಗುತ್ತದೆ.
ವಿಶ್ವವಿದ್ಯಾಲಯದ ಅಂತಸ್ತಿನಲ್ಲಿ ದೈಹಿಕ ಶಿಕ್ಷಣದ ಕಾರ್ಯಕ್ರಮ : ವಿಶ್ವವಿದ್ಯಾಲಯದ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಯೌವನವನ್ನು ದಾಟಿ ಪ್ರೌಢವಸ್ಥೆಗೆ ಕಾಲಿಡುವ ಹೊಸ್ತಿಲಲ್ಲಿರುತ್ತಾರೆ. ಈಚೆಗೆ ಪ್ರಪಂಚದ ಅನೇಕ ದೇಶಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದಲ್ಲ ಒಂದು ರೀತಿಯ ದೈಹಿಕ ಶಿಕ್ಷಣವನ್ನು ಕಡ್ಡಾಯ ಮಾಡಿರುವರು. ಆದರೆ ಇದು ಅನಗತ್ಯ ಎಂದು ವಾದಿಸುವವರೂ ಉಂಟು. ಕೆಲವು ವಿಶ್ವವಿದ್ಯಾಲಯಗಳು ದೈಹಿಕ ಶಿಕ್ಷಣದಲ್ಲೂ ಪರೀಕ್ಷೆ ನಡೆಸುವರು. ಇತರ ವ್ಯಾಸಂಗ ವಿಷಯಗಳಂತೆ ಇದರಲ್ಲೂ ಉತ್ತೀರ್ಣರಾದವರಿಗೆ ಮಾತ್ರ ಪದವಿ ನೀಡುವುದು ಆಚರಣೆಯಲ್ಲಿದೆ.  

	ಅಮೆರಿಕದ ಕೆಲವು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಸೇರಿದಾಗಲೆ ಅವರ ದೈಹಿಕ ಸ್ವಸ್ಥತೆಯ (ಫಿಸಿಕಲ್ ಫಿಟ್‍ನೆಸ್) ಪರೀಕ್ಷೆ ನಡೆಸಿ ಆ ಮಟ್ಟಗೆ ನ್ಯೂನತೆಯುಳ್ಳವರು ಕಡ್ಡಾಯವಾಗಿ ಸೇರಬೇಕಾದ ದೈಹಿಕ ಶಿಕ್ಷಣದ ಕಾರ್ಯಕ್ರಮವನ್ನು ಸೂಚಿಸುವರು. ಈಜುಗಾರಿಕೆ, ಕುಸ್ತಿ, ನೃತ್ಯ, ಸಾಮೂಹಿಕ ಆಟಗಳು, ವೈಯಕ್ತಿಕ ಆಟಗಳು - ಇವುಗಳಲ್ಲಿ ಯಾವುದಾದರೂ ಒಂದಕ್ಕೆ ಸೇರಿ ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಆ ಶಿಕ್ಷಣ ಪಡೆಯಬೇಕಾಗುತ್ತದೆ. ಇನ್ನು ಕೆಲವು ಕಾಲೇಜುಗಳಲ್ಲಿ ದೈಹಿಕ ಚಟುವಟಿಕೆಗಳ ಜೊತೆಗೆ ಸೈದ್ಧಾಂತಿಕ ಜ್ಞಾನವನ್ನೂ ಬೋಧಿಸುವರು. ವಿದ್ಯಾರ್ಥಿಗಳು ಹೊಸದಾಗಿ ಸೇರಿದ ಮೊದಲ ವಾರದಲ್ಲೇ ಏರ್ಪಡಿಸುವ ಈ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣದ ತತ್ತ್ವದೃಷ್ಟಿ, ಉದ್ದೇಶ, ಕಾರ್ಯಕ್ರಮ, ಆಧುನಿಕ ಪ್ರಪಂಚದಲ್ಲಿ ಅದರ ಪ್ರಾಮುಖ್ಯ ಮುಂತಾದ ವಿಷಯಗಳನ್ನು ಕುರಿತ ಉಪನ್ಯಾಸಮಾಲೆಯೊಂದನ್ನು ಏರ್ಪಡಿಸುವುದುಂಟು.      

	ತಮ್ಮ ಶಿಕ್ಷಣ ಮುಗಿಸಿಕೊಂಡು ಜೀವನ ಆರಂಭಿಸುವ ಹಂತದಲ್ಲಿರುವ ಕಾಲೇಜು ವಿದ್ಯಾರ್ಥಿಗಳು ಅಂದಿಗಾಗಲೆ ತಾವು ಆರಂಭಿಸುವ ಕ್ರೀಡೆ ವ್ಯಾಯಮಾದಿಗಳಲ್ಲಿ ಮತ್ತಷ್ಟು ಕೌಶಲ್ಯವನ್ನು ಸಾಧಿಸಿ ಮುಂದೆ ಜೀವನದಲ್ಲಿ ಅದನ್ನು ಹವ್ಯಾಸಗಳಾಗಿ ಅನುಸರಿಸುವವರು ಹಲವರಿರಬಹುದು. ಮಿಕ್ಕವರಲ್ಲಿ ಕೆಲವರು ಸಾಮೂಹಿಕ ಪಂದ್ಯಾಟಗಳಲ್ಲಿ ಭಾಗವಹಿಸಲು ಹೆಚ್ಚಿನ ದಕ್ಷತೆ ಸಾಧಿಸಿಕೊಳ್ಳಲು ಯತ್ನಿಸಬಹುದು. ಉಳಿದವರು ತಮ್ಮ ಮುಂದಿನ ಜೀವನಕ್ಕೆ ಅಗತ್ಯವೆನಿಸುವ ದೇಹದಾಢ್ರ್ಯ ಆರೋಗ್ಯಕರವಾದ ಅಭ್ಯಾಸ ಮುಂತಾದವನ್ನು ಅಗತ್ಯವಾಗಿ ರೂಢಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಕಾಲೇಜಿನ ಮಟ್ಟದಲ್ಲಿ ಅವರವರ ಅವಶ್ಯಕತೆಯನ್ನನುಸರಿಸಿ ದೈಹಿಕ ಶಿಕ್ಷಣ ವೈವಿಧ್ಯವಯವೆನ್ನಬಹುದಾದ ಕಾರ್ಯಕ್ರಮವನ್ನು ಒಳಗೊಂಡಿರಬೇಕಾಗುತ್ತದೆ.    

	ಮಹಿಳಾ ವಿದ್ಯಾರ್ಥಿಗಳಿಗೂ ಯುಕ್ತರೀತಿಯ ದೈಹಿಕ ಶಿಕ್ಷಣದ ಕಾರ್ಯಕ್ರಮ ಅಗತ್ಯ. ಕಾರಣಾಂತರಗಳಿಂದ ಅದು ತನ್ನವರಿಗೆ ದೊರಕದಾಗಿರಬಹುದಾದ ದೈಹಿಕ ಶಿಕ್ಷಣದ ಕೊರತೆ ಇಲ್ಲಿ ನಿವಾರಣೆಯಾಗಬೇಕು.  ಅವರಲ್ಲಿ ಸಹಕಾರ, ಸಾಮಾಜಿಕ ದುಡಿಮೆ, ಸಂಘನಿಷ್ಠೆ ಮತ್ತು ಕ್ರೀಢಾಭಿರುಚಿಗಳನ್ನು ಬೆಳೆಸಬಲ್ಲ ಸಾಮೂಹಿಕ  ಕ್ರೀಡೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಬೇಕು. ಗಾಲ್ಫ್, ಟೆನಿಸ್, ಈಜುಗಾರಿಕೆ, ಬ್ಯಾಂಡ್ಮಿಂಟನ್, ಕುದುರೆಸವಾರಿ, ಟೇಬಲ್‍ಟೆನಿಸ್, ಬಿಲ್ಲುವಿದ್ಯೆ, ನಡಿಗೆ(ಹೈಕಿಂಗ್) ನೀರ್ಗಲ್ಲಮೇಲೆ ಜಾರುವುದು ಮುಂತಾದವುಗಳಲ್ಲಿವರು ಅಭಾಗವಹಿಸಬಹುದು. ಜೊತೆಗೆ ಬ್ಯಾಸ್ಕೆಟ್‍ಬಾಲ್, ವಾಲಿಬಾಲ್, ಸಾಕರ್ ಮುಂತಾದ ಸಾಮೂಹಿಕ ಕ್ರೀಡೆಗಳಲ್ಲೂ ನೃತ್ಯಾದಿ ತಾಳಬದ್ಧ ಚಟುವಟಿಕೆಗಳಲ್ಲೂ ಈಜುಗಾರಿಕೆ ಅಂಗಸಾಧನೆ ಮುಂತಾದ ಚಟುವಟಿಕೆಗಳಲ್ಲೂ ಭಾಗವಹಿಸಬಹುದು.         

	ಈ ಹಂತದಲ್ಲಿ ಸಹಶಿಕ್ಷಣ ಅಪೇಕ್ಷಣೀಯ. ಈ ಬಗ್ಗೆ ಹಿಂದೆ ಇದ್ದ ನಿಷೇಧ ಈಗ ಬಹುಮಟ್ಟಿಗೆ ಕಡಿಮೆಯಾಗಿದೆ. ವ್ಯಾಯಾಮ ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸುವಾಗಲೂ ತರಗತಿಯಲ್ಲಿ ಶಿಕ್ಷಣ ಪಡೆಯುವಾಗಲೂ ಯುವಕಯುವತಿಯರು ಒಟ್ಟಿಗೆ ಇರಬಹುದು.  ಆಯ ಚಟುವಟಿಕೆಯಲ್ಲಿ ಪ್ರವೀಣರೆನಿಸಿದ ಅಧ್ಯಾಪಕರು ಆ ತರಗತಿಯನ್ನು ನಡೆಸಬಹುದು. ಕಾಲೇಜನ್ನು ಬಿಡುವ ವೇಳೆಗೆ ಎಲ್ಲ ವಿದ್ಯಾರ್ಥಿನಿಯರೂ ಯಾವುದಾದರೂ ಚಟುವಟಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಕಾರ್ಯ ಸಾಧಿಸಿದ್ದರೆ ಮುಂದೆ ಅದನ್ನು ಜೀವನದಲ್ಲಿ ಒಂದು ಹವ್ಯಾಸವನ್ನಾಗಿ ಅನುಸರಿಸುವ ಅವಕಾಶವಿರುತ್ತದೆ. ಇಲ್ಲವಾದರೆ ಬಹುತೇಕ ಮಹಿಳೆಯರು ಮನೆಯಲ್ಲೇ ಉಳಿದು ಕೇವಲ ಕಾಡುಹರಟೆಯಲ್ಲಿ ಕಾಲ ವ್ಯಯಮಾಡಬೇಕಾಗುತ್ತದೆ.        

	ಪರ್ಯಾಯ ಕಾರ್ಯಕ್ರಮಗಳು : ಕೆಲವು ಶಾಲಾಕಾಲೇಜುಗಳಲ್ಲೂ ವಿಶ್ವವಿದ್ಯಾಲಯಗಳಲ್ಲೂ ವಿದ್ಯಾರ್ಥಿಗಳು ದೈಹಿಕ ಶಿಕ್ಷಣಕ್ಕೆ ಬದಲಾಗಿ ಇತರ ಕಾರ್ಯಕ್ರಮಗಳಿಗೆ ಸೇರಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ. ರಿಸರ್ವ್ ಆಫೀಸರ್ಸ್ ಟ್ರೈನಿಂಗ್ ಕೋರ್ಸ್(ಆರ್.ಓ.ಟಿ.) ನ್ಯಾಷನಲ್ ಕೇಡೆಟ್ ಕೋರ್ (ಎನ್‍ಸಿಸಿ), ಸಿವಿಕ್ ಗಾರ್ಡ್ ಮುಂತಾದುವು ಅಂಥ ಪರ್ಯಾಯ ಕಾರ್ಯಕ್ರಮಗಳು. ಆ ಕಾರ್ಯಕ್ರಮಗಳಲ್ಲಿ ದೈಹಿಕ ಅಂಗಚಲನೆಗಳು ಜರುಗುವುವೆಂಬ ಆಧಾರದ ಮೇಲೆ ಅವನ್ನು ದೈಹಿಕ ಶಿಕ್ಷಣಕ್ಕೆ ಸಂವಾದಿ ಕಾರ್ಯಕ್ರಮಗಳಾಗಿ ಆರಿಸಿಕೊಳ್ಳುವ ಅವಕಾಶವೀಯಬಹುದೆಂದು ಸಲಹೆ ಮಾಡಿದ್ದರೂ ಆ ಪರ್ಯಾಯ ಕಾರ್ಯಕ್ರಮದ ಔಚಿತ್ಯದ ಬಗ್ಗೆ ಅನೇಕರು ಸಮ್ಮತಿಸುತ್ತಿಲ್ಲ. ಎನ್‍ಸಿಸಿ, ಆರ್.ಒ.ಟಿ.ಗಳಂಥ ಕಾರ್ಯಕ್ರಮಗಳು ಸೂಕ್ತರೀತಿಯ ಚಟುವಟಿಕೆಗಳಾದರೂ ದೈಹಿಕ ಶಿಕ್ಷಣದ ಉದ್ದೇಶಗಳನ್ನೆಲ್ಲ ಅವು ಸಾಧಿಸಲಾರವು.  ಕವಾಯಿತು, ವಾದ್ಯ ವೃಂದಗಳ ಕಾರ್ಯಕ್ರಮಗಳಿಂದ ಕೆಲವು ಮಾಂಸಖಂಡಗಳು ಕಾರ್ಯಮುಖವಾಗಬಹುದಾದರೂ ಅದಷ್ಟರಿಂದ ದೇಹದ ಪುಷ್ಟಿ, ಶಕ್ತಿಜೈತನ್ಯಾದಿಗಳನ್ನು ರೂಢಿಸಿಕೊಳ್ಳುವುದು ಸಾಧ್ಯವಲ್ಲ. ದೈಹಿಕ ಶಿಕ್ಷಣದಿಂದಾಗುವ ನರಮಾಂಸಖಂಡಗಳ ಸಮನ್ವಯವನ್ನಾಗಲಿ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನಾಗಿ ಅವು ರೂಢಿಸಲಾರವು.  

	ಇನ್ನು ಕೆಲವು ಕಡೆ ದೈಹಿಕ ಶಿಕ್ಷಣಕ್ಕೆ ಬದಲಾಗಿ ಅಂತರಶಾಲಾ ಕ್ರೀಡಾಕೂಟಗಳಲ್ಲಿ ಪಾತ್ರವಹಿಸಿದರೆ ಸಾಕೆಂಬ ನಿಯಮವುಂಟು. ಹತ್ತಾರು ವರ್ಷಗಳ ಅನುಭವದಿಂದ ಇದು ಉಚಿತವಲ್ಲ ಎಂದು ಕಂಡುಬಂದಿದೆ. ವಾಲಿಬಾಲ್, ಫುಟ್‍ಬಾಲ್. ಕ್ರಿಕೆಟ್, ಬ್ಯಾಡ್‍ಮಿಂಟನ್ ಮುಂತಾದ ಯಾವುದಾದರೂ ಒಂದು ಅಂತರಶಾಲಾ ಪಂದ್ಯಗಳಲ್ಲಿ ಎಂದೊ ಕೆಲವು ದಿನ ಭಾಗವಹಿಸುವುದರಿಂದ ದೈಹಿಕ ಶಿಕ್ಷಣದಿಂದಾಗುವ ಪ್ರತಿಫಲಗಳೆಲ್ಲ ಸಿದ್ಧಿಸಲಾರವೆಂಬುದು ಈಗ ಸ್ಪಷ್ಟವಾಗಿದೆ. ಜೊತೆಗೆ ದೈಹಿಕ ಶಿಕ್ಷಣದಿಂದ ತಪ್ಪಿಸಿಕೊಳ್ಳಲು ಇದೊಂದು ನೆಪವಾಗುತ್ತಿದೆಯೆಂಬ ಅಭಿಪ್ರಾಯವೂ ಬಲಿಯುತ್ತಿದೆ. ಆದರೆ ಅವರು ಭಾಗವಹಿಸುವ ಪಂದ್ಯಾಟಕ್ಕೆ ಸಂಬಂಧಿಸಿದ ಕ್ರೀಡೆಯಲ್ಲಿ ಮಾತ್ರ ಅವರ ಹಾಜರಾತಿಗೆ ವಿನಾಯಿತಿ ನೀಡಬಹುದು. 

	ದೈಹಿಕ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ : ದೈಹಿಕ ಶಿಕ್ಷಣ ಮಾಂಸಖಂಡಗಳ ಚಟುವಟಿಕೆಗಳಿಗೆ ಸಂಬಂಧಿಸಿದ ಶಿಕ್ಷಣವಾದರೆ ಆರೋಗ್ಯಶಿಕ್ಷಣ ಆರೋಗ್ಯ ಜೀವನಕ್ಕೆ ಸಂಬಂಧಿಸಿದ ಜ್ಞಾನ, ಅಭ್ಯಾಸ ಮತ್ತು ಚಿತ್ತಪ್ರವೃತ್ತಿಗಳಿಗೆ ಸಂಬಂಧಿಸಿದ ಶಿಕ್ಷಣ. ಆದರೂ ಅವರೆಡನ್ನೂ ಹಲವಾರು ಸಂವಾದಿಯೆಂದೂ ಒಂದರೊಡನೊಂದು ಕೂಡಿರುವ ಭಾಗವೆಂದೂ ಭಾವಿಸುವುದುಂಟು. ಅವೆರಡರ ಉದ್ದೇಶ ಕಾರ್ಯಕ್ರಮ ಮತ್ತು ಬೋಧನವಿಧಾನಗಳು ಭಿನ್ನರೀತಿಯವು. ಆದರೂ ದೈಹಿಕ ಶಿಕ್ಷಣ ಆರೋಗ್ಯ ಶಿಕ್ಷಣದ ಹಲವು ಮುಖಗಳಿಗೆ ಪೂರಕವೆನಿಸಬಹುದು. ಶಾಲಾಕಾಲೇಜುಗಳ ಆರೋಗ್ಯಜೀವನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ದೈಹಿಕ ಶಿಕ್ಷಣದ ಅಧ್ಯಾಪಕರು ಭಾಗವಹಿಸಬೇಕಾಗುತ್ತದೆ.  

	ದೈಹಿಕ ಶಿಕ್ಷಣಕ್ಕೆ ಆರೋಗ್ಯ ಶಿಕ್ಷಣ ನಿಕಟವಾಗಿ ಸಂಬಂಧಿಸಿದ್ದರೂ ಅದನ್ನು ಪ್ರತ್ಯೇಕ ವಿಷಯವೆಂದು ಪರಿಗಣಿಸುವುದು ರೂಢಿಗೆ ಬಂದಿದೆ. ಆ ಶಿಕ್ಷಣ ಮೂರು ಮುಖ್ಯ ಕ್ಷೇತ್ರಗಳನ್ನೊಳಗೊಂಡಿದೆ: ಶಾಲೆಯ ಆರೋಗ್ಯದಾಯಕ ಸನ್ನಿವೇಶಗಳು.  ಆರೋಗ್ಯ ಸೇವಾ ಕಾರ್ಯಗಳು ಮತ್ತು ಆರೋಗ್ಯ ಜೀವನಕ್ಕೆ ಸಂಬಂಧಿಸಿದ ಜ್ಞಾನಭೋದೆ; ಈ ಒಂದೊಂದು ಕ್ಷೇತ್ರವೂ ಹಲವಾರು ಅಂಶಗಳನ್ನೊಳಗೊಂಡಿದ್ದು ಅವುಗಳನ್ನು ಕುರಿತ ಬೋಧನೆಯನ್ನು ಆಯಾಕ್ಷೇತ್ರದಲ್ಲಿ ತಜ್ಞರಾದವರು ನಿರ್ವಹಿಸಬೇಕಾಗುತ್ತದೆ. ಎಂದಮೇಲೆ ಆ ಹೊಣೆಗಾರಿಕೆಯನ್ನು  ದೈಹಿಕ ಶಿಕ್ಷಣ ನಿರ್ವಹಿಸಲಾರದೆಂಬುದು ಸ್ಪಷ್ಟವಾಗಿದೆ. ಆದರೂ ಆರೋಗ್ಯ ಶಿಕ್ಷಣದ ಉದ್ದೇಶ, ವ್ಯಾಪ್ತಿ, ಸಂವಿಧಾನ, ಬೋಧನಾಕ್ರಮ ಮುಂತಾದವನ್ನೆಲ್ಲ ದೈಹಿಕ ಶಿಕ್ಷಣದ ಅಧ್ಯಾಪಕರು ಅರಿತಿರಬೇಕಾಗುತ್ತದೆ. ಆ ಮೂಲಕ ದೈಹಿಕ ಶಿಕ್ಷಣ ಆರೋಗ್ಯ ಶಿಕ್ಷಣಕ್ಕೆ ಪೂರಕವೂ ಸಹಾಯಕವೂ ಆಗಿ ಕೆಲಸ ಮಾಡಬಲ್ಲದು. 

	ದೈಹಿಕ ಶಿಕ್ಷಣದ ಅಧ್ಯಾಪಕರು :  ಕೇವಲ ಸಾಮೂಹಿಕ ಕವಾಯಿತೇ ದೈಹಿಕ ಶಿಕ್ಷಣವೆಂದು ಭಾವಿಸಿದ್ದ ಕಾಲದಲ್ಲಿ ತಕ್ಕಮಟ್ಟಿಗೆ ಕವಾಯಿತು ಅಭ್ಯಾಸಮಾಡಿರುವ ಯಾರಾದರೂ ಅಧ್ಯಾಪಕರಾಗಬಹುದೆಂಬ ಭಾವನೆಯಾಯಿತು. ದೈಹಿಕ ಶಿಕ್ಷಣದ ಅರ್ಥ, ವ್ಯಾಪ್ತಿ, ಕಾರ್ಯಕ್ರಮ ಇವೆಲ್ಲ ವಿಸ್ತರಿಸಿದಂತೆ ಆ ಕಾರ್ಯಕ್ಕೆ ತಕ್ಕ ವ್ಯಕ್ತಿತ್ವ, ಶಿಕ್ಷಣ ಮತ್ತು ತರಪೇತು ಇವನ್ನೆಲ್ಲ ಪಡೆದಿರುವವರನ್ನು ಆಯ್ಕೆ ಮಾಡುವ ಸಂಪ್ರದಾಯ ಅನುಷ್ಠಾನಕ್ಕೆ ಬಂದಿದೆ. ಅಮೆರಿಕದಂಥ ಕೆಲವು ದೇಶಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪದವೀ ತರಗತಿಯಲ್ಲಿ ಆ ವಿಷಯವನ್ನು ಒಂದು ಐಚ್ಛಿಕವಾಗಿ ಅಧ್ಯಯನ ಮಾಡಿದವರನ್ನು ನೇಮಕಮಾಡುವುದುಂಟು. ಸಣ್ಣಪುಟ್ಟ ಶಾಲೆಗಳಾದರೆ ಅವರು ಇತರ ವ್ಯಾಸಂಗ ವಿಷಯಗಳನ್ನೂ ಬೋಧಿಸುವುದುಂಟು. ಕಾಲೇಜು ಮಟ್ಟದಲ್ಲಿ ಪದವೀಧರ ಸ್ನಾತಕೋತ್ತರ ಶಿಕ್ಷಣ ಪಡೆದವರನ್ನೂ (ಎಂ.ಎ) ನೇಮಕ ಮಾಡಿಕೊಳ್ಳುವರು. ಆದರೆ ಇದು ಎಲ್ಲ ದೇಶಗಳಲ್ಲೂ ಸಾಧ್ಯವಾಗದಿರಬಹುದು. ಪ್ರಾಥಮಿಕ ಶಾಲೆಗಳಿಗೆ ದೈಹಿಕ ಶಿಕ್ಷಣದಲ್ಲಿ ತರಬೇತು ಪಡೆದಿರುವ ಶಾಲೆಯ ಒಬ್ಬ ಅಧ್ಯಾಪಕರನ್ನು ಆ ಕಾರ್ಯಕ್ಕೆ ನೇಮಿಸಬಹುದು. ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣದಲ್ಲಿ ಡಿಪ್ಲೊಮ ಪಡೆದವರನ್ನೂ ಕಾಲೇಜುಗಳಲ್ಲಿ ಪದವೀಧರರನ್ನು (ಬಿ.ಎಡ್.) ನೇಮಿಸಿಕೊಳ್ಳುಬಹುದು.            

	ದೈಹಿಕ ಶಿಕ್ಷಣದ ಅಧ್ಯಾಪಕರ ತರಬೇತಿಗೆ ಯುಕ್ತರಾದವರನ್ನು ಆಯ್ಕೆ ಮಾಡುವುದು ಅಗತ್ಯ. ಮಿಕ್ಕೆಲ್ಲ ವಿಷಯಗಳ ಅಧ್ಯಾಪಕರಿಗಿಂತ ದೈಹಿಕ ಶಿಕ್ಷಣದ ಅಧ್ಯಾಪಕರನ್ನು ವಿದ್ಯಾರ್ಥಿಗಳು ಅನುಕರಿಸುವ ಸಂಭವ ಹೆಚ್ಚು. ಆದ್ದರಿಂದ ಅವರು ಆದರಣೀಯ ಅಂಗಸೌಷ್ಠವವನ್ನೂ ವ್ಯಕ್ತಿತ್ವವನ್ನೂ ಹೊಂದಿರಬೇಕು. ಜೊತೆಗೆ ಅವರ ಗುಣಶೀಲಗಳೂ ಅನುಕರಣೀಯವಾಗಿರಬೇಕು. ಅಲ್ಲದೆ ಅವರು ತಮ್ಮ ವೃತ್ತಿಗೆ ಸೇರುವ ಹೊತ್ತಿಗೆ ವ್ಯಾಯಾಮದಂತೆ ಕ್ರೀಡಾಕೂಟಗಳಲ್ಲೂ ಸ್ಪರ್ಧೆಗಳಲ್ಲೂ ಭಾಗವಹಿಸಿ ಅನುಭವ ಸಾಧಿಸಿರಬೇಕು.          

	ದೈಹಿಕ ಶಿಕ್ಷಣದ ಪ್ರತ್ಯೇಕ ವಿಭಾಗವಿರುವ ಕಾಲೇಜುಗಳಲ್ಲಿ ಆ ವಿಭಾಗದ ಮುಖ್ಯಸ್ಥರಾಗತಕ್ಕವರಿಗೆ ಅಧ್ಯಾಪಕರಿಗೆ ಅಗತ್ಯವಾದ ಅರ್ಹತೆಗಳ ಜೊತೆಗೆ ದೈಹಿಕ ಶಿಕ್ಷಣದ ವಿವಿಧ ಮುಖಗಳಿಗೆ ಸಂಬಂಧಿಸಿದ ಹೆಚ್ಚಿನ ಅನುಭವವೂ ಆಡಳಿತ ದಕ್ಷತೆಯೂ ಅಗತ್ಯ. ದೈಹಿಕ ಶಿಕ್ಷಣದ ವಿಭಾಗದ ಕಟ್ಟಡದ ವಿನ್ಯಾಸ, ಕಾರ್ಯಕ್ರಮಗಳ ಹಂಚಿಕೆ, ವಿವಿದ ಕ್ರೀಡೆಗಳಿಗೆ ಸಂಬಂಧಿಸಿದ ನಿಯಮಗಳು ಆಟದ ಬಯಲುಗಳ ನಿರ್ಮಾಣ ಸ್ಪರ್ಧಾಕ್ರೀಡೆಗಳ ವ್ಯವಸ್ಥೆ, ಉಪಕರಣಾದಿಗಳ ಪರಿಚಯ, ಬಳಕೆ ಮತ್ತು ಕೊಳ್ಳುವಿಕೆ ಮುಂತಾದ ಕ್ಷೇತ್ರಗಳಲ್ಲಿ ಹಲವಾರು ವರ್ಷ ಅನುಭವ ಸಾಧಿಸಿರುವ ದಕ್ಷ ಅಧ್ಯಾಪಕರು ಆ ಸ್ಥಾನಕ್ಕೆ ಅರ್ಹರೆನಿಸಬಲ್ಲರು.       

	ಕ್ರೀಡಾಸ್ಪರ್ಧೆಗಳು : ಕಳೆ ಶತಮಾನದ ಎರಡನೆಯ ದಶಕದಲ್ಲಿ ಪಾಶ್ಚಾತ್ಯ ದೇಶಗಳ ಶಾಲೆಗಳ ಕ್ರೀಡಾಸ್ಪರ್ಧೆಗಳು ಆರಂಭವಾದುವೆನ್ನಬಹುದು. ಮೊದಮೊದಲು ಕಾಲೇಜುಗಳಲ್ಲೂ ಅನಂತರ ಪ್ರೌಢಶಾಲೆಗಳಲ್ಲೂ ಸ್ಪರ್ಧೆಗಳು ಏರ್ಪಡಲು ಆರಂಭವಾದುವು. ಶಾಲೆ ಅಥವಾ ಕಾಲೇಜಿನ ಕ್ರಿಡಾಪಟುಗಳು ತಮ್ಮತಮ್ಮಲ್ಲೇ ತಂಡಗಳನ್ನು ಏರ್ಪಡಿಸಿಕೊಂಡು ಪಂದ್ಯಾಟಗಳನ್ನು ಏರ್ಪಡಿಸುತ್ತಿದ್ದರು. ಆಯಾ ಶಾಲೆ ಅಥವಾ ಕಾಲೇಜಿನಲ್ಲಿ ಒಳ್ಳೆಯ ಆಟಗಾರರು ಅಕ್ಕಪಕ್ಕದ ಶಾಲಾಕಾಲೇಜುಗಳ ತಂಡಗಳೊಡನೆ ಸ್ಪರ್ಧೆಯ ಆಟಗಳನ್ನು ಆಡುವುದು ಕ್ರಮಕ್ರಮವಾಗಿ ಪ್ರಚಾರಕ್ಕೆ ಬಂತು. ಮೊದಮೊದಲು ಶಾಲೆಯ ಆಡಳಿತಗಾರರು ಅದಕ್ಕೆ ಪ್ರೋತ್ಸಾಹ ನೀಡುತ್ತಿರಲಿಲ್ಲ. ಅವು ದೈಹಿಕ ಶಿಕ್ಷಣದ ಅಂಗವಾಗಿಯೂ ಸೇರಿರಲಿಲ್ಲ. ಈ ಶತಮಾನದ ಆರಂಭದ ಹೊತ್ತಿಗೆ ಅವು ಶಾಲೆ ಅಥಮಾ ಕಾಲೇಜುಗಳ ಮನ್ನಣೆಯನ್ನು ಪಡೆದುವು. ಅವುಗಳ ವ್ಯವಸ್ಥೆ ನಿರ್ವಹಣೆ ಮುಂತಾದ ಆಡಳಿತಾಂಶಗಳಿಗೆ ಗಮನವಿತ್ತು ಕ್ರಮಕ್ರಮವಾಗಿ ಅವನ್ನು ದೈಹಿಕ ಶಿಕ್ಷಣದ ಅಂಗವಾಗಿ ಅಂಗೀಕರಿಸಿದುವು. ಮೊದಲನೆಯ ಮಹಾಯುದ್ಧದ ಅನಂತರ ಕ್ರೀಡಾಸ್ಪರ್ಧೆಗಳು ದೈಹಿಕ ಶಿಕ್ಷಣದ ಬಹುಮುಖ್ಯ ಅಂಶಗಳಾದವು. ಎರಡನೆಯ ಮಹಾಯುದ್ಧದ ಅನಂತರ ಶಾಲಾಕಾಲೇಜುಗಳ ಆಂತರಿಕ ಮತ್ತು ಅಂತರಕ್ರಿಡಾಸ್ಪರ್ಧೆಗಳು ದೈಹಿಕ ಶಿಕ್ಷಣದ ಬಹು ಮುಖ್ಯ ಕಾರ್ಯಕ್ರಮಗಳೆನಿಸಿದವು. ದೈಹಿಕ ಶಿಕ್ಷಣಕ್ಕೆ ಗೊತ್ತು ಮಾಡುವ ಕಾಲ ಮತ್ತು ಹಣದ ಬಹುಪಾಲು ಅವಕ್ಕೆ ವ್ಯಯವಾಗುವಂತಾಗಿ ಈಗ ದೈಹಿಕ ಶಿಕ್ಷಣಕ್ಕೆ ಗೊತ್ತುಮಾಡುವ ಕಾಲ ಮತ್ತು ಹಣದ ಬಹುಪಾಲು ಅವಕ್ಕೆ ವ್ಯಯವಾಗುವಂತಾಗಿ ಈಗ ದೈಹಿಕ ಶಿಕ್ಷಣದಲ್ಲಿ ಕ್ರಿಡಾಸ್ಪರ್ಧೆಗಳು ಬಹುಮುಖ್ಯವೂ ರಂಜನೀಯವೂ ಆದ ಕಾರ್ಯಕ್ರಮವಾಗಿ ರೂಪಗೊಂಡಿವೆ.   
    
	ಶಾಲಾಕಾಲೇಜುಗಳಲ್ಲಿ ಆಂತರಿಕ ಕ್ರೀಡಾಸ್ಪರ್ಧೆಗಳು : ದೈಹಿಕ ಶಿಕ್ಷಣ ಶಾಲಾ ಕಾಲೇಜುಗಳಲ್ಲಿ ಆರಂಭವಾಗುವುದಕ್ಕೆ ಹಿಂದಿನಿಂದಲೂ ವಿದ್ಯಾರ್ಥಿಗಳು ವಿರಾಮ ಕಾಲದಲ್ಲಿ ತಮ್ಮ ತಮ್ಮೊಳಗೇ ಆಟವಾಡುತ್ತಿದ್ದರು. ಇದಕ್ಕೆ ಅವರಿಗೆ ಆಟದಲ್ಲಿ ಸ್ವಾಭಾವಿಕವಾಗಿ ಬಂದಿದ್ದ ಆಸಕ್ತಿಯೇ ಕಾರಣ. ಪ್ರಾ. ಬೆಲ್ಲನಂಥ ಶಿಕ್ಷಣವೇತ್ತರು ಶಿಕ್ಷಣದಲ್ಲಿ ಅದರೆ ಪ್ರಾಮುಖ್ಯವನ್ನು ತೋರಿಸಿಕೊಟ್ಟ ಮೇಲೆ ಅದನ್ನೊಂದು ಬೋಧನವಿಧಾನವಾಗಿ ಬಳಸುವುದಕ್ಕೆ ಮಾತ್ರ ಉತ್ತೇಜನ ಬಂತೇ ಹೊರತು ಶಾಲೆಯ ಕಾರ್ಯಕ್ರಮಗಳಲ್ಲದು ಸೇರಲಿಲ್ಲ. ದೈಹಿಕ ಶಿಕ್ಷಣದ ಕಾರ್ಯಕ್ರಮ ಪ್ರಚಾರಕ್ಕೆ ಬಂದಮೇಲೆ ಶಿಕ್ಷಣವೆತ್ತರು ಕ್ರೀಡಾಸ್ಪರ್ಧೆಗಳಿಗೂ ಅದರಲ್ಲಿ ಅವಕಾಶ ಕಲ್ಪಿಸಬಹುದೆಂದು ಅಭಿಪ್ರಾಯಪಟ್ಟರು. ಆಂತರಿಕವಾಗಿ ಮಕ್ಕಳು ಮೇಲಾಟಗಳನ್ನು ನಡೆಸುಮ ಕಾರ್ಯಕ್ರಮಗಳಿಂದ ದೈಹಿಕ ಶಿಕ್ಷಣದ ಅರ್ಥ ವ್ಯಾಪ್ತಿ ಹೆಚ್ಚಿದುದರ ಜೊತೆಗೆ ಆ ಮೂಲಕ ಅದರ ಉದ್ದೇಶವನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಧಿಸಬಹುದೆಂಬ ಅಂಶಗಳು ಸ್ಪಷ್ಟಪಟ್ಟವು. ಈ ಶತಮಾನದ ಆರಂಭದ ವೇಳೆಗೆ ಆಂತರಿಕ ಪಂದ್ಯಾಟಗಳು ವಿಶ್ವವಿದ್ಯಾಲಯಗಳಲ್ಲಿ ಆರಂಭವಾಗಿದ್ದುವು. ಮುಂದಿನ ದಶಮಾನಗಳಲ್ಲಿ ಅಂತರಕಾಲೇಜು ಸ್ಪರ್ಧೆಗಳೂ ಪ್ರಚಾರಕ್ಕೆ ಬಂದುವು. ವಿಶ್ವವಿದ್ಯಾಲಯದ ಹಾಗೂ ಕಾಲೇಜುಗಳ ಕ್ರೀಡಾತಂಡಗಳಿಗೆ ಒಳ್ಳೆಯ ಆಟಗಾರರನ್ನೊದಗಿಸಲು ಪ್ರೌಢಶಾಲೆಗಳಲ್ಲಿ ಆಂತರಿಕ ಕ್ರೀಡಾ ಸ್ಪರ್ಧೆಗಳನ್ನು ವ್ಯವಸ್ಥೆಗೊಳಿಸುವ ಅಗತ್ಯ ವ್ಯಕ್ತಪಟ್ಟಂತೆ ಶಾಲೆಗಳೂ ಕಾಲೇಜುಗಳೂ ಆ ಕಾರ್ಯಕ್ರಮಕ್ಕೆ ಅಗತ್ಯ ಪ್ರೋತ್ಸಾಹವನ್ನೂ ಹಣವನ್ನೂ ಒದಗಿಸಲಾರಂಭಿಸಿದುವು.     
 
	ಆ ಕ್ರೀಡೆಗಳನ್ನು ವ್ಯವಸ್ಥೆಗೊಳಿಸಿ ನಡೆಸುವ ಕಾರ್ಯ ದೈಹಿಕ ಶಿಕ್ಷಣದ ಅಧ್ಯಾಪಕರ ಭಾಗಕ್ಕೆ ಬಂದಿತು. ಆ ಕ್ರೀಡೆಗಳು ದೈಹಿಕ ಶಿಕ್ಷಣದ ಪಠ್ಯಕ್ರಮದಲ್ಲಿ  ಈಗ ಪ್ರಧಾನ ಅಂಶಗಳಾಗಿವೆ. ಮೊದಮೊದಲು ಕೇವಲ ಶಾಲಾನಂತರದ ಸಮಯದಲ್ಲಿ ಕೇವಲ ವಿದ್ಯಾರ್ಥಿಗಳ ಸ್ವಂತ ಉಪಕ್ರಮದ ರೂಪದಲ್ಲಿ ಆರಂಭವಾದ ಈ ಕಾರ್ಯಕ್ರಮ ಶಾಲೆಯ ಅಧಿಕೃತ ದೈಹಿಕ ಶಿಕ್ಷಣದ ಪಠ್ಯಕ್ರಮದ ಅಂಗವಾಗಿ ಸೇರಿಕೊಂಡು ಅದನ್ನು ಪರಿಪುಷ್ಟಿಗೊಳಿಸುವಂತಾಯಿತು. ದೈಹಿಕ ಶಿಕ್ಷಣದ ಇತರ ಕಾರ್ಯಕ್ರಮಗಳು ಶಾಲೆಯ ಕೆಲಸದ ವೇಳೆಯಲ್ಲಿ ನಡೆಯುತ್ತಿದ್ದರೂ ಕ್ರೀಡಾಚಟುವಟಿಕೆಗಳು ಶಾಲಾನಂತರದಲ್ಲೂ ನಡೆಯುವ ಹಿಂದಿನ ಸಂಪ್ರದಾಯ ಮಾತ್ರ ಮುಂದುವರಿದುಕೊಂಡೇ ಬಂತು.  ಇದರಿಂದ ಕೆಲವು ಅನುಕೂಲಗಳು ದೊರೆತವು. ವಿದ್ಯಾರ್ಥಿಗಳು ತಮತಮಗೊಪ್ಪುವ ಕ್ರೀಡೆಗಳಲ್ಲಿ ಭಾಗವಹಿಸಲು ಇಚ್ಛಿಸುವುದರಿಂದ ಅವರೆಲ್ಲರಿಗೂ ಅವರವರ ಆಯ್ಕೆಯ ಕ್ರೀಡೆಯ ಪರಿಚಯವನ್ನಾಗಲಿ ಅಭ್ಯಾಸವನ್ನಾಗಲಿ ತರಗತಿಯ ವೇಳೆಯಲ್ಲೇ ದೊರಕಿಸುವುದು ಸ್ವಾಭಾವಿಕವಾಗಿ ಅಸಾಧ್ಯವೆನಿಸಿದ್ದರಿಂದ ಅದಕ್ಕೆ ಶಾಲಾನಂತರದ ಸಮಯ ಅನಿವಾರ್ಯವೇ ಆಯಿತು. ಇದರ ಫಲವಾಗಿ ಅಧ್ಯಾಪಕರ ನೇತೃತ್ವದಲ್ಲಿ ದೈಹಿಕ ಶಿಕ್ಷಣ ಶಾಲಾನಂತರದ ಕಾಲಕ್ಕೂ ವಿಸ್ತರಿಸಿತು.       

ಕ್ರೀಡಾತಂಡಗಳಿಗೆ ತರಬೇತು : ಶಾಲಾಕಾಲೇಜುಗಳ ಆಂತರಿಕ ಕ್ರೀಡಾಕೂಟಗಳಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಸ್ಪರ್ಧೆಗಳಿಗೆ ಅರ್ಹರಾದ ಆಟಗಾರರು ಉದ್ಭವಿಸಬೇಕಾಗಿರುವುದರಿಂದ ಆಂತರಿಕ ಕ್ರೀಡಾವ್ಯವಸ್ಥೆ, ಕ್ರೀಡೆಗಳಲ್ಲಿ ಭಾಗಿಯಾಗಿರತಕ್ಕವರಿಗೆ ಶಿಕ್ಷಣ, ಸ್ಪರ್ಧಾಕ್ರೀಡೆಗಳು - ಇವು ಈಚೆಗೆ ಪ್ರಾಮುಖ್ಯಕ್ಕೆ ಬರುತ್ತಿವೆ. ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಬೋಧಕರೇ ಸಾಮಾನ್ಯವಾಗಿ ಈ ಕಾರ್ಯಗಳನ್ನೆಲ್ಲ ನಿರ್ವಹಿಸುವುದಾದರೂ ಅನುಭವವುಳ್ಳ ಅಧ್ಯಾಪಕವರ್ಗದವರೊಬ್ಬರನ್ನು ಕಾರ್ಯದರ್ಶಿಯಾಗಿ ಆರಿಸುವ ಸಂಪ್ರದಾಯ ಅನೇಕ ಕಡೆಗಳಲ್ಲಿದೆ.  ಆದರೂ ಶಾಲೆಯ ವಿವಿಧ ಕ್ರೀಡಾಪಟುಗಳಿಗೆ ತರಬೇತು ನೀಡಲು ಅಗತ್ಯವೆನಿಸಿದೆಡೆ ಭಾಗಶಃ ಕಾಲದ ಶಿಕ್ಷಕರನ್ನು (ಕೋಚ್) ನೇಮಿಸಿಕೊಳ್ಳುವುದು ಅಗತ್ಯ. ಕಾಲೇಜುಗಳಲ್ಲೂ ವಿಶ್ವವಿದ್ಯಾಲಯಗಳಲ್ಲೂ ದೈಹಿಕ ಶಿಕ್ಷಣದ ವಿಭಾಗಕ್ಕೆ ಒಬ್ಬ ನಿರ್ದೇಶಕರು ಮುಖ್ಯಸ್ಥರಾಗಿದ್ದು ಹಲವು ಸಹಾಯಕ ನಿರ್ದೇಶಕರು ಇರುವುದರಿಂದ ವಿವಿಧ ಕ್ರೀಡೆಗಳಲ್ಲಿ ಪಾತ್ರವಹಿಸುವ ಆಟಗಾರರಿಗೆ ಅಗತ್ಯವೆನಿಸುವ ಶಿಕ್ಷಣ ನೀಡಲು ಹೆಚ್ಚಿನ ಸೌಲಭ್ಯವುಂಟು.  ಅಗತ್ಯವೆನಿಸಿದರೆ ಭಾಗಶಃ ಶಿಕ್ಷಕರನ್ನು ಕೋಚುಗಳನ್ನಾಗಿ ನೇಮಿಸಿಕೊಳ್ಳುವ ಅವಕಾಶವೂ ಉಂಟು.    
     
ಹಣಕಾಸು : ಅಂತರಕಾಲೇಜುಗಳ ಕ್ರೀಡೆಗಳಿಗೆ ಬೇಕಾದಷ್ಟು ಹಣಕಾಸು ಆಂತರಿಕ ಕ್ರೀಡೆಗಳಿಗೆ ಬೇಕಾಗುವುದಿಲ್ಲ. ಅವುಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆಯ ದೃಷ್ಟಿಯಿಂದ ಅವಕ್ಕಾಗುವ ವೆಚ್ಚ ಕಡಿಮೆಯೆಂದೇ ಹೇಳಬಹುದು. ಬಹುಮಟ್ಟಿಗೆ ಈ ಹಣ ವಿದ್ಯಾರ್ಥಿಗಳು ಆಟಪಾಟಗಳಿಗೆ ನೀಡುವ ಶುಲ್ಕದಿಂದಲೂ ಸರ್ಕಾರ ಅಥವಾ ವಿಶ್ವವಿದ್ಯಾಲಯ ನೀಡುವ ಸಹಾಯಧನದಿಂದಲೂ ಬರುತ್ತದೆ. ಆ ಹಣದ  ಬಹುಪಾಲು ಆಟದ ಬಯಲುಗಳ ನಿರ್ಮಾಣ, ಆಟದ ಸಾಮಾನು ಮತ್ತು ಉಪಕರಣಗಳ ಪೂರೈಕೆ, ಪಂದ್ಯಾಟಗಳಲ್ಲಿ ಆಟಗಾರರಿಗೆ ಉಪಹಾರ ಬಹುಮಾನ, ಸಮವಸ್ತ್ರ ಮುಂತಾದ ಬಾಬುಗಳಿಗೆ ವಿನಿಯೋಗವಾಗುತ್ತದೆ.  ಈಚೆಗೆ ಕೆಲವು ದೇಶಗಳಲ್ಲಿ ಶಾಲಾಕಾಲೇಜುಗಳ ಪಂದ್ಯಾಟಗಳ ಪ್ರವೇಶಕ್ಕೆ ಶುಲ್ಕ ವಸೂಲು ಮಾಡಿ ಅದನ್ನೂ ಕ್ರೀಡಾನಿಧಿಗೆ ಬಳಸಿಕೊಳ್ಳುತ್ತಿರುವರು.    

ಆಂತರಿಕ ಕ್ರೀಡಾಸ್ಪರ್ಧೆಗಳು : ಆಂತರಿಕ ಕ್ರೀಡೆಗಳಲ್ಲಿ ಸ್ಪರ್ಧೆಗಳಿಗೆ ಪ್ರಾಧಾನ್ಯವೀಯುವುದನ್ನು ಕೆಲವರು ಒಪ್ಪದಿದ್ದರೂ ಹದವರಿತು ಏರ್ಪಡಿಸುವ ಆಂತರಿಕ ಸ್ಪರ್ಧೆಗಳು ಕ್ರೀಡಾಚಟುವಟಿಕೆಗಳಿಗೆ ಆಸಕ್ತಿ ಮತ್ತು ಉತ್ಸಾಹಗಳನ್ನು ದೊರಕಿಸಿಕೊಳ್ಳಲು ನೆರವಾಗುತ್ತವೆ. ಜೊತೆಗೆ ಅಂತರಶಾಲಾ ಮತ್ತು ಇತರ ಸ್ಪರ್ಧೆಗಳಲ್ಲಿ ಭಾಗವಹಿಸಬಲ್ಲ ಆಟಗಾರರನ್ನು ಗುರುತಿಸಿ ಅವರಿಗೆ ವಿಶೇಷ ತರಬೇತು ನೀಡುವುದಕ್ಕೂ ಅವುಗಳಿಂದ ಅನುಕೂಲ. ಮೇಲಾಗಿ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದ ನೀತಿನಿಯಮಗಳ ಅನುಸರಣೆಯಲ್ಲೂ ಆಟಗಾರರಿಗೆ ಅನುಭವ ದೊರಕುತ್ತದೆ. ದೈಹಿಕ ಶಿಕ್ಷಣದ ಅಧ್ಯಾಪಕರು ಅಥವಾ ನಿರ್ದೇಶಕರು ವಿವಿಧ ಕ್ರೀಡಾಸ್ಪರ್ಧೆಗಳಿಗೆ (ಟೂರ್ನಮೆಂಟ್) ತಂಡಗಳನ್ನು ಆಯ್ಕೆಮಾಡಿ, ವ್ಯವಸ್ಥೆಗೊಳಿಸಿ ನಡೆಸುವ ಕಾರ್ಯದಲ್ಲಿ ಒಳ್ಳೆಯ ಅನುಭವ ಹೊಂದಿರಬೇಕು.     
ದೈಹಿಕ ಶಿಕ್ಷಣದ ವ್ಯವಸ್ಥೆಗೆ ಬೇಕಾದ ಅವಶ್ಯಕತೆಗಳು : ಸ್ವಾಭಾವಿಕ ಚಟುವಟಿಕೆಗಳಿಗೆ ಪ್ರಾಧಾನ್ಯವಿರುವ ದೈಹಿಕ ಶಿಕ್ಷಣಕ್ಕೆ ಆಟದ ಬಯಲು, ವ್ಯಾಯಾಮಶಾಲೆ ಮತ್ತು ಉಪಕರಣಗಳು ತೀರ ಅಗತ್ಯ.  

1  ಆಟದ ಬಯಲು ಶಾಲೆಗೆ ಹತ್ತಿರವಿದ್ದು ಒಂದು ಯೋಜನೆಯಂತೆ ಇಂದಿನ ಮತ್ತು ಮುಂದಿನ ಅವಶ್ಯಕತೆಗಳನ್ನನುಸರಿಸಿ ಆಟದ ಬಯಲು, ವಿಚಾರ ಕ್ಷೇತ್ರ, ಕ್ರೀಡಾರಂಗ - ಇವೆಲ್ಲ ರಚನೆಯಾಗಬೇಕು. ಭಾರತದಲ್ಲಿ ದೈಹಿಕ ಶಿಕ್ಷಣ ಮತ್ತು ವಿಹಾರದ ಕೇಂದ್ರೀಯ ಸಲಹಾ ಸಮಿತಿ ಪ್ರಾಥಮಿಕ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ 50 ರಿಂದ 100 ಚದರಡಿಯಷ್ಟೂ ಪ್ರೌಢಶಾಲೆಯ ಪ್ರತಿ ವಿದ್ಯಾರ್ಥಿಗೆ 250 ರಿಂದ 500 ಚದರಡಿಯಷ್ಟೂ ಕಾಲೇಜಿನಲ್ಲಿ ಪ್ರತಿ ವಿದ್ಯಾರ್ಥಿಗೂ 250 ರಿಂದ 750 ಚದರ ಅಡಿಯಷ್ಟೂ ಆಟದ ಬಯಲುಬೇಕೆಂದು ನಿರ್ಧರಿಸಿದೆ.        

2. ವ್ಯಾಯಾಮ ಶಾಲೆ : ಇದು ಬರೀ ಅಂಗಸಾಧನೆಯ ಅಖಾಡವಲ್ಲ, ವ್ಯಾಯಾಮ, ಮನೆಯೊಳಗಿನ ಆಟ, ಮನೋರಂಜನ ಚಟುವಟಿಕೆ ಮುಂತಾದವಕ್ಕೂ ಅದು ಉಪಯುಕ್ತವೆನಿಸುವಂತಿರಬೇಕು. ಅದು ದೊಡ್ಡ ಮಂದಿರವಾಗಿದ್ದು, ಒಂದುಕಡೆ ಕಾರ್ಯಲಯ, ಉಗ್ರಾಣ, ಬಟ್ಟೆ ಬದಲಾಯಿಸುವ ಕೊಠಡಿ, ಸ್ನಾನದ ಮನೆ - ಇವಕ್ಕೆಲ್ಲ ಅವಕಾಶ ಇರಬೇಕು. ನೆಲ ನಯವಾಗಿದ್ದು ತೊಳೆಯಲು ಅನುಕೂಲವಾಗಿರಬೇಕು. ತಕ್ಕಷ್ಟು ಗಾಳಿ ಬೆಳಕು ಒಳಗೆ ಬರುವಂತಿರಬೇಕು. ಸಂಜೆ ವೇಳೆ ಬೆಳಕಿಗಾಗಿ ವಿದ್ಯುದ್ವೀಪಗಳು ಇರಬೇಕು. ಮನೆಯೊಳಗಿನ ಆಟಗಳಿಗಾಗಿ ಚಾವಣಿ ತಕ್ಕಷ್ಟು ಎತ್ತರವಾಗಿರಬೇಕು. ಉಪಕರಣಾದಿಗಳನ್ನು ಗೋಡೆಗಳಿಗೆ ಅಳವಡಿಸಿದ್ದು ಆಟಗಾರರಿಗೆ ಅಡಚಣೆ ಆಗದಂತಿರಬೇಕು. ಉದ್ದ ಅಗಲಕ್ಕಿಂತ ಒಂದೂವರೆಯಷ್ಟಿರಬೇಕು. ಎತ್ತರ 20 ಅಡಿಯಷ್ಟಿದ್ದರೆ ಸಾಕು.     
 
3.  ಉಪಕರಣಾದಿಗಳು : ಕಾಲೇಜು ವಿಶ್ವವಿದ್ಯಾಲಯಗಳ ದೈಹಿಕ ಶಿಕ್ಷಣದ ಉಪಯುಕ್ತತೆ ವ್ಯಾಯಾಮ ಮತ್ತು ಕ್ರೀಡೆಗಳಿಗೆ ಅಗತ್ಯವೆನಿಸುವ ಉಪಕರಣಾದಿ ಸೌಲಭ್ಯಗಳನ್ನು ಅವಲಂಬಿಸುತ್ತದೆಂದು ಹೇಳಬಹುದು. ಬಳಸುವ ಸಾಮಾಗ್ರಿಗಳು ಆಯಾ ಆಟಕ್ಕೆ ಒಪ್ಪುವಂತಿರಬೇಕು. ಕೆಲವು ಸಾಮಗ್ರಿಗಳು - ಉದಾಹರಣೆಗೆ ಗೋಲುಕಣೆ, ಬಲೆಯ ಕಂಬ, ಗೋಡೆಯ ಪಟ್ಟೆ, ಸಮಾಂತರ ಪಟ್ಟೆ, ರೋಮನ್‍ರಿಂಗ್ ಇತ್ಯಾದಿ ಸಾಮಾನುಗಳು ಶಾಶ್ವತ ಬಳಕೆಯವು ಮತ್ತು ಗೊತ್ತಾದ ಸ್ಥಳಕ್ಕೆ ಅಳವಡಿಸತಕ್ಕವು. ಬಲೆ, ಚೆಂಡು, ರ್ಯಾಕೆಟ್ಟು(ದಾಂಟು) ಮುಂತಾದವು ದಿನ ಬಳಕೆಗೆ ಅಗತ್ಯವಾಗಿದ್ದು ಅಂದಿಗಂದಿಗೆ ಕೊಳ್ಳಬೇಕಾಗಿರತಕ್ಕವು.   
  
ಭಾರತದಲ್ಲಿ ರಾಷ್ಟ್ರೀಯ ಶಿಸ್ತು ಯೋಜನೆ ಮತ್ತು ರಾಷ್ಟ್ರೀಯ ಸ್ವಾಸ್ಥ್ಯದಳ (ಫಿಸಿಕಲ್ ಎಜುಕೇಷನ್ ನ್ಯಾಷನಲ್ ಡಿಸಿಪ್ಲಿನ್ ಅಂಡ್ ನ್ಯಾಷನಲ್ ಫಿಟ್ನೆಸ್ ಕೋರ್) : ಭಾರತದಲ್ಲಿ ದೈಹಿಕ ಶಿಕ್ಷಣ ಕಾರ್ಯಕ್ರಮ 20ನೆಯ ಶತಮಾನದ ಎರಡನೆಯ ದಶಕದಿಂದ ಆರಂಭವಾಯಿತೆಂದು ಹೇಳಬಹುದು. ಮೊಟ್ಟಮೊದಲು ವೈಜ್ಞಾನಿಕ ತತ್ತ್ವಾಧಾರದ ಮೇಲೆ ಎಚ್.ಸಿ.ಬಕ್ ಮದ್ರಾಸಿನಲ್ಲಿ ದೈಹಿಕ ಶಿಕ್ಷಣ ವಿದ್ಯಾಲಯವನ್ನು 1920ರಲ್ಲಿ ಪ್ರಾರಂಭಿಸಿದರು. ಮೊದಲು ಅವರು ಪಾಶ್ಚತ್ಯ ದೈಹಿಕ ಶಿಕ್ಷಣದ ಮಾದರಿಯಲ್ಲಿ ಅದನ್ನು ವ್ಯವಸ್ಥೆಗೊಳಿಸಿದ್ದರೂ ಕ್ರಮಕ್ರಮವಾಗಿ ಇಲ್ಲಿನ ಅವಶ್ಯಕತೆಗೆ ಅನುಗುಣವಾಗಿ ಅದನ್ನು ಮಾರ್ಪಡಿಸಿಕೊಳ್ಳುವ ಯತ್ನ ನಡೆಯಿತು.  ಹಾಗೂ ಕ್ರಿಡಾಚಟುವಟಿಕೆಗಳನ್ನೂ ಸೇರಿಸಿಕೊಳ್ಳಲಾಯಿತು. ದೇಶೀಯ ಕ್ರೀಡಾಚಟುವಟಿಕೆಗಳಿಗೆ ಅದರಲ್ಲಿ ತಕ್ಕ ಸ್ಥಾನವನ್ನು ಕೊಡಲಾಯಿತು. ಭಾರತ ಸ್ವತಂತ್ರವಾದ ಮೇಲೆ ಇಲ್ಲಿನ ಯುವಜನರ ವ್ಯಕ್ತಿತ್ವ, ಕರ್ತವ್ಯ ಮತ್ತು ಹೊಣೆಗಾರಿಕೆಗಳನ್ನು ಸ್ಪಷ್ಟವಾಗಿ ರೂಪಿಸಲು ಆ ಕ್ರೀಡೆಗಳು ಅಗತ್ಯವೆಂದು ಭಾವಿಸಿ ಇಡೀ ದೈಹಿಕ ಶಿಕ್ಷಣದ ಪಠ್ಯಕ್ರಮ ಪುನವ್ಯರ್ವಸ್ಥೆಯಾಗಿದೆ.        
  
ಭಾರತದ ರಾಷ್ಟ್ರೀಯ ಸೈನ್ಯದ (ಇಂಡಿಯನ್ ನ್ಯಾಷನಲ್ ಆರ್ಮಿ) ಜಿ.ಕೆ.ಭೋನ್‍ಸ್ಲೆಯವರು 1954 ರಲ್ಲಿ ಭಾರತದ ಸಾಂಸ್ಕøತಿಕ ಒಗ್ಗಟ್ಟನ್ನು ಪ್ರತಿನಿಧಿಸುವ ಜಾನಪದ ನೃತ್ಯ, ಸಂಗೀತ ಮತ್ತು ದೇಶಪ್ರೇಮದ ಗೀತೆಗಳನ್ನು ಒಳಗೊಂಡಂತೆ ಒಂದು ರಾಷ್ಟ್ರೀಯ ಶಿಸ್ತುಯೋಜನೆಯನ್ನು ರೂಪಿಸಿದರು.   

1963ರಲ್ಲಿ ಭಾರತ ಸರ್ಕಾರ ವಿವಿಧ ಯುವಜನಸೇವಾ ಕಾರ್ಯಕ್ರಮಗಳಲ್ಲಿ ಸಮನ್ವಯವೇರ್ಪಡಿಸಿ ಒಂದು ಸಂಯೋಜನೆ ಸಿದ್ಧಗೊಳಿಸಲು ನೇಮಿಸಿದ ಕುಂಜ್ರು ಸಮಿತಿ ದೈಹಿಕ ಶಿಕ್ಷಣ ಮತ್ತು ರಾಷ್ಟ್ರೀಯ ಶಿಸ್ತುಯೋಜನೆಗಳನ್ನು  ಸಮನ್ವಯಗೊಳಿಸುವ ಬಗ್ಗೆ ತನ್ನ ವರದಿಯನ್ನು ಒಪ್ಪಿಸಿತು. ತತ್ಪರಿಣಾಮವಾಗಿ ರಾಷ್ಟ್ರದ ಸಕಲ ಪ್ರೌಢಶಾಲೆಗಳಲ್ಲೂ ರಾಷ್ಟ್ರೀಯ ಸ್ವಾಸ್ಥ್ಯ ದಳದ ಉಗಮವಾಯಿತು. ಈ ಕಾರ್ಯಕ್ರಮ ರಾಷ್ಟ್ರೀಯ ಶಿಸ್ತುಯೋಜನೆ ಮತ್ತು ದೈಹಿಕ ಶಿಕ್ಷಣ ಇವುಗಳ ಅತ್ಯುತ್ತಮ ಲಕ್ಷಣಗಳನ್ನು ಅಳವಡಿಸಿಕೊಂಡಿದೆ. 

ಸದ್ಯದಲ್ಲಿ ಭಾರತದಲ್ಲಿ 21,000 ದೈಹಿಕ ಶಿಕ್ಷಣದ ಹಾಗೂ ಇಲ್ಲಿಯ ತನಕ 7,000 ರಾಷ್ಟ್ರೀಯ ಶಿಸ್ತು ಯೋಜನೆಯ ಶಿಕ್ಷಕರು ಇದ್ದಾರೆಂದು ಅಂದಾಜು ಮಾಡಲಾಗಿದೆ. ಒಟ್ಟಿಗೆ ರಾಷ್ಟ್ರೀಯ ಸ್ವಾಸ್ಥ್ಯದಳ ಸುಮಾರು 28,000 ಶಿಕ್ಷಕರಿಂದ ನಿಯಂತ್ರಿಸಲ್ಪಡುತ್ತದೆ.  

ಎಲ್ಲಿ ಸುಶಿಕ್ಷಿತ ದೈಹಿಕ ಶಿಕ್ಷಣದ ಶಿಕ್ಷದರ ಅಭಾವವಿದೆಯೊ ಅಲ್ಲಿ ದೈಹಿಕ ಶಿಕ್ಷಣ ಅಥವಾ ರಾಷ್ಟ್ರೀಯ ಶಿಸ್ತುಯೋಜನೆ ಅಥವಾ ಈ ಎರಡರಲ್ಲೂ ಅಲ್ಪಾವಧಿ ಶಿಕ್ಷಣ ಪಡೆದ ಸಾಮಾನ್ಯ ಅಧ್ಯಾಪಕರು ರಾಷ್ಟ್ರೀಯ ಸ್ವಾಸ್ಥ್ಯದಳದ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.   
(ಎನ್.ಎಸ್.ವಿ.; ಕೆ.ಆರ್.ಜಿಒ.; ಎನ್.ಐ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ